ಫ್ರೆಂಚ್ ಓಪನ್: ರವಿವಾರ ಜೊಕೊವಿಕ್-ಮರ್ರೆ ಫೈನಲ್ ಫೈಟ್
ಪ್ಯಾರಿಸ್, ಜೂ.4: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಹಾಗೂ ಆ್ಯಂಡಿ ಮರ್ರೆ ನಡುವೆ ನಡೆಯಲಿರುವ ಫ್ರೆಂಚ್ ಓಪನ್ ಫೈನಲ್ ಫೈಟ್‌ಗೆ ವೇದಿಕೆ ಸಜ್ಜಾಗಿದೆ.
ರವಿವಾರ ಇಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಹಾಗೂ ಮರ್ರೆ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಗೆ ಹೋರಾಟ ನಡೆಸಲಿದ್ದಾರೆ. ಈ ಇಬ್ಬರು ಆಟಗಾರರು ಏಳನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.
ಜೊಕೊವಿಕ್ ಈವರೆಗೆ 11 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದು, ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಈತನಕ ಗೆದ್ದುಕೊಂಡಿಲ್ಲ. ಜೊಕೊವಿಕ್ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದರೆ ಎಲ್ಲ 4 ಗ್ರಾನ್‌ಸ್ಲಾಮ್ ಜಯಿಸಿದ 8ನೆ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಈ ವರ್ಷ ವಿಂಬಲ್ಡನ್, ಯುಎಸ್ ಓಪನ್ ಹಾಗೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚಾಂಪಿಯನ್ ಆಗಿರುವ ಜೊಕೊವಿಕ್ ರವಿವಾರ ಜಯಶಾಲಿಯಾದರೆ ಎಲ್ಲ ಪ್ರಮುಖ ಟ್ರೋಫಿ ಜಯಿಸಿದ ಶ್ರೇಯಸ್ಸಿಗೆ ಭಾಜನರಾಗುವರು. 29ರ ಹರೆಯದ ಜೊಕೊವಿಕ್ ಪ್ಯಾರಿಸ್‌ನಲ್ಲಿ ಮೂರು ಬಾರಿ ಫೈನಲ್ ಪಂದ್ಯವನ್ನು ಸೋತಿದ್ದರು.
ಜೊಕೊವಿಕ್ 2012 ಹಾಗೂ 2011ರಲ್ಲಿ ರಫೆಲ್ ನಡಾಲ್‌ಗೆ ಸೋತು ರನ್ನರ್-ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು. ಕಳೆದ ವರ್ಷ ಸ್ವಿಸ್‌ನ ಬಿಗ್‌ಹಿಟ್ಟರ್ ಸ್ಟಾನ್ ವಾವ್ರಿಂಕ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದರು. ಜೊಕೊವಿಕ್ 20ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್ ಆಡುತ್ತಿದ್ದಾರೆ. ಮರ್ರೆ ವಿರುದ್ಧ ಆಡಿರುವ 7 ಫೈನಲ್ ಪಂದ್ಯಗಳ ಪೈಕಿ ನಾಲ್ಕು ಬಾರಿ ಜಯಶಾಲಿಯಾಗಿದ್ದಾರೆ. ಆದರೆ,2012ರ ಯುಎಸ್ ಓಪನ್ ಹಾಗೂ 2013ರ ವಿಂಬಲ್ಡನ್ ಓಪನ್‌ನಲ್ಲಿ ಮುಗ್ಗರಿಸಿದ್ದರು.
29ರ ಹರೆಯದ ಮರ್ರೆ ಈ ಹಿಂದೆ ಮೂರು ಬಾರಿ ಫ್ರೆಂಚ್ ಓಪನ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದರು. ಈ ವರ್ಷ ಪ್ರಶಸ್ತಿಯನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಲು ಎದುರು ನೋಡುತ್ತಿದ್ದಾರೆ
ಪ್ಯಾರಿಸ್‌ನಲ್ಲಿ ಬ್ರಿಟನ್‌ನ ಫ್ರೆಡ್ ಪೆರ್ರಿ ಕೊನೆಯ ಬಾರಿ ಚಾಂಪಿಯನ್ ಆಗಿದ್ದರು. 1937ರಲ್ಲಿ ಬನ್ನಿ ಆಸ್ಟಿನ್ ಫೈನಲ್‌ಗೆ ತಲುಪಿದ್ದರು.
ನಮಗಿಬ್ಬರಿಗೂ ಈ ಪಂದ್ಯ ಅತ್ಯಂತ ಪ್ರಮುಖವಾಗಿದೆ. ನೊವಾಕ್ ಕ್ಯಾರಿಯನ್ ಸ್ಲಾಮ್ ಜಯಿಸಲು ಯತ್ನಿಸಿದರ, ನಾನು ಚೊಚ್ಚಲ ಫ್ರೆಂಚ್ ಓಪನ್ ಗೆಲ್ಲಲು ಯತ್ನಿಸುವೆ. ಫ್ರೆಂಚ್ ಓಪನ್ ಜಯಿಸುವುದು ಸುಲಭ ಸಾಧ್ಯವಲ್ಲ ಎಂದು ಮರ್ರೆ ಹೇಳಿದ್ದಾರೆ.