×
Ad

ತ್ರಿಕೋನ ಸರಣಿ: ವೆಸ್ಟ್‌ಇಂಡೀಸ್ ಗೆಲುವಿನಾರಂಭ

Update: 2016-06-04 23:54 IST

ಗಯಾನ, ಜೂ.4: ಸ್ಪಿನ್ನರ್ ಸುನೀಲ್ ನರೇನ್‌ರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ವೆಸ್ಟ್‌ಇಂಡೀಸ್ ತಂಡ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಸರಣಿಯಲ್ಲಿ ಗೆಲುವಿನ ಆರಂಭ ಪಡೆದಿದೆ.

ಶುಕ್ರವಾರ ಇಲ್ಲಿ ನಡೆದ ತ್ರಿಕೋನ ಸರಣಿಯ ಮೊದಲ ಹಗಲು-ರಾತ್ರಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ ತಂಡ ನರೇನ್(6-27) ಹಾಗೂ ಬ್ರಾತ್‌ವೈಟ್(2-35) ಸಂಘಟಿತ ದಾಳಿಗೆ ತತ್ತರಿಸಿ 46.5 ಓವರ್‌ಗಳಲ್ಲಿ ಕೇವಲ 188 ರನ್ ಗಳಿಸಿ ಆಲೌಟಾಯಿತು.

ಆಫ್ರಿಕದ ಪರ ರೊಸ್ಸೌ(61 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್(30), ಎಬಿ ಡಿವಿಲಿಯರ್ಸ್(31), ಡುಮಿನಿ(23) ಹಾಗೂ ಅಮ್ಲ(20) ಎರಡಂಕೆಯ ಸ್ಕೋರ್ ದಾಖಲಿಸಿದರು.

ಗೆಲ್ಲಲು ಸುಲಭ ಸವಾಲು ಪಡೆದ ವಿಂಡೀಸ್ 48.1 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 191 ರನ್ ಗಳಿಸಿತು.

ಔಟಾಗದೆ 67 ರನ್(67 ಎಸೆತ, 2 ಬೌಂಡರಿ, 6 ಸಿಕ್ಸರ್) ಗಳಿಸಿದ ಆಲ್‌ರೌಂಡರ್ ಕೀರನ್ ಪೊಲಾರ್ಡ್ ವಿಂಡೀಸ್‌ಗೆ 11 ಎಸೆತ ಬಾಕಿ ಇರುವಾಗಲೆ ಗೆಲುವು ತಂದುಕೊಟ್ಟರು. ಚಾರ್ಲ್ಸ್(31) ಹಾಗೂ ಡ್ವೇಯ್ನ್ ಬ್ರಾವೊ(30) ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಅಶಿಸ್ತಿನಿಂದ ಬೌಲಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ 23 ಇತರೇ ರನ್ ನೀಡಿತು. ಸ್ಪಿನ್ನರ್‌ಗಳಾದ ಫಾಂಗಿಸೊ(3-40) ಹಾಗೂ ಇಮ್ರಾನ್ ತಾಹಿರ್(2-41) ಐದು ವಿಕೆಟ್ ಹಂಚಿಕೊಂಡರು. ದಕ್ಷಿಣ ಆಫ್ರಿಕವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿ ಹಾಕಲು ನೆರವಾಗಿದ್ದ ಸ್ಪಿನ್ನರ್ ನರೇನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News