×
Ad

ಜೊಕೊವಿಕ್‌ಗೆ ಚೊಚ್ಚಲ ಫ್ರೆಂಚ್‌ ಓಪನ್‌ ಕಿರೀಟ

Update: 2016-06-05 22:06 IST

ಪ್ಯಾರಿಸ್, ಜೂ.5: ವಿಶ್ವದ ನಂ.1 ತಾರೆ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು ರವಿವಾರ ಇಲ್ಲಿ ನಡೆದ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ಟ್ರೋಫಿ ಎತ್ತುವ ಮೂಲಕ ಫ್ರೆಂಚ್ ಓಪನ್‌ನಲ್ಲಿ ಚೊಚ್ಚಲ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ರೋಲ್ಯಾಂಡ್ ಗ್ಯಾರಸ್‌ನಲ್ಲಿ ಇಂದು ನಡೆದ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಜೊಕೊವಿಕ್ ಅವರು ಬ್ರಿಟನ್‌ನ ಆ್ಯಂಡಿ ಮರ್ರೆ ವಿರುದ್ಧ 3-6, 6-1, 6-2, 6-4 ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಬಾಚಿಕೊಂಡರು. ಇದರೊಂದಿಗೆ ಜೊಕೊವಿಕ್ 12ನೆ ಗ್ರಾನ್ ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವೃತ್ತಿ ಬದುಕಿನಲ್ಲಿ ಇದು ಅವರು ಜಯಿಸಿದ 65ನೆ ಪ್ರಶಸ್ತಿಯಾಗಿದೆ.

ಮರ್ರೆಗೆ ಜೊಕೊವಿಕ್ ಚೊಚ್ಚಲ ಫ್ರೆಂಚ್ ಓಪನ್ ಗೆಲ್ಲುವ ಅವಕಾಶ ನಿರಾಕರಿಸಿದರು. ವಿಶ್ವದ ನಂ.1 ತಾರೆ ಜೊಕೊವಿಕ್ ಮತ್ತು ನಂ.2 ಮರ್ರೆ ನಡುವೆ ತೀವ್ರ ಹಣಾಹಣಿ ನಿರೀಕ್ಷಿಸಲಾಗಿತ್ತು. ಮರ್ರೆಗೆ ಮೂರನೆ ಗ್ರಾನ್ ಸ್ಲಾಮ್ ಜಯಿಸುವ ಪ್ರಯತ್ನ ಫಲಿಸಲಿಲ್ಲ. ಬ್ರಿಟನ್‌ನ ಫ್ರೆಡ್ ಪೆರ್ರಿ 1935ರಲ್ಲಿ ಕೊನೆಯದಾಗಿ ಫ್ರೆಂಚ್ ಓಪನ್ ಜಯಿಸಿದ ಸಾಧನೆ ಮಾಡಿದ್ದರು. ಆ ಬಳಿಕ ಬ್ರಿಟನ್‌ನ ಯಾರಿಗೂ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಮರ್ರೆ 81 ವರ್ಷಗಳ ಬಳಿಕ ದಾಖಲೆ ನಿರ್ಮಿಸುವ ಕನಸು ಕಂಡಿದ್ದರು. ಆದರೆ ಜೊಕೊವಿಕ್ ಇದಕ್ಕೆ ಅವಕಾಶ ನೀಡಲಿಲ್ಲ. ವಿಶ್ವದ ಅಗ್ರಶ್ರೇಯಾಂಕದ ಆಟಗಾರರಾದ ಜೊಕೊವಿಕ್ ಮತ್ತು ಮರ್ರೆ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಕಣಕ್ಕಿಳಿದಿದ್ದರು. ಮರ್ರೆ ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ್ದರು.ಆದರೆ ಬಳಿಕ ಮೂರು ಸೆಟ್‌ಗಳಲ್ಲಿ ಜೊಕೊವಿಕ್ ಮೇಲುಗೈ ಸಾಧಿಸಿ ಪ್ರಶಸ್ತಿಯನ್ನು ಬಾಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News