×
Ad

ಫೋರ್ಬ್ಸ್ ವಿಶ್ವದ ಶ್ರೀಮಂತ ಟೆನಿಸ್ ಆಟಗಾರ್ತಿಯರ ಪಟ್ಟಿ: ಸೆರೆನಾ ವಿಲಿಯಮ್ಸ್ ನಂ.1

Update: 2016-06-07 23:33 IST

ಲಾಸ್ ಏಂಜಲಿಸ್, ಜೂ.7: ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಶನಿವಾರ ಕೊನೆಗೊಂಡ ಫ್ರೆಂಚ್ ಓಪನ್‌ನಲ್ಲಿ ರನ್ನರ್-ಅಪ್‌ಗೆ ತೃಪ್ತಿಪಟ್ಟಿಕೊಂಡಿದ್ದರೂ ಫೋರ್ಬ್ಸ್ ಮ್ಯಾಗಜಿನ್ ಮಂಗಳವಾರ ಪ್ರಕಟಿಸಿರುವ ಅತ್ಯಂತ ಶ್ರೀಮಂತ ಮಹಿಳಾ ಕ್ರೀಡಾಳುಗಳ ಪಟ್ಟಿಯಲ್ಲಿ ರಶ್ಯದ ಮರಿಯಾ ಶರಪೋವಾರನ್ನು ಹಿಂದಿಕ್ಕಿ ಅಗ್ರ ಸ್ಥಾನ ಪಡೆದಿದ್ದಾರೆ.

 ಕಳೆದ 12 ತಿಂಗಳಲ್ಲಿ ಬಹುಮಾನ ಮೊತ್ತ ಹಾಗೂ ಇತರ ಆದಾಯದ ಮೂಲಕ 28.9 ಮಿಲಿಯನ್ ಡಾಲರ್ ಸಂಪಾದನೆ ಮಾಡುವ ಮೂಲಕ ಸೆರೆನಾ ಕಳೆದ 11 ವರ್ಷಗಳಿಂದ ವಿಶ್ವದ ನಂ.1 ಶ್ರೀಮಂತ ಮಹಿಳಾ ಕ್ರೀಡಾಪಟುವಾಗಿ ಮೆರೆದಿದ್ದ ಶರಪೋವಾರನ್ನು ಹಿಂದಕ್ಕೆ ತಳ್ಳಿದ್ದಾರೆ ಎಂದು ನಿಯತಕಾಲಿಕ ಸೋಮವಾರ ವರದಿ ಮಾಡಿದೆ.

ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನ ವೇಳೆ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಶರಪೋವಾ ಆ ಬಳಿಕ ನೀಡಿದ ಹೇಳಿಕೆಯಲ್ಲಿ ತಾನು ನಿಷೇಧಿತ ಉದ್ದೀಪನಾ ದ್ರವ್ಯ ಮೆಲ್ಡೊನಿಯಂನ್ನು ಸೇವಿಸಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದರು. ಶರಪೋವಾ ಡೋಪಿಂಗ್ ಬಲೆಗೆ ಬಿದ್ದ ಬಳಿಕ ಕೆಲವು ಪ್ರಾಯೋಜಕರು ಆಕೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುಕೊಂಡಿದ್ದರು.

ಇದೀಗ ಟೆನಿಸ್‌ನಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಶರಪೋವಾ 21.9 ಮಿಲಿಯನ್ ಡಾಲರ್ ಆದಾಯದೊಂದಿಗೆ ಶ್ರೀಮಂತ ಮಹಿಳಾ ಕ್ರೀಡಾಳುಗಳ ಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೆ ಕುಸಿದಿದ್ದಾರೆ.

ಅಮೆರಿಕದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಪಟು ರಾಂಡಾ ರೌಸೆ 14ಮಿಲಿಯನ್ ಡಾಲರ್ ಆದಾಯ ಗಳಿಸಿ 3ನೆ ಸ್ಥಾನದಲ್ಲಿದ್ದಾರೆ.

  ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಅಗ್ರ-10ರಲ್ಲಿ ಟೆನಿಸ್ ಆಟಗಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರುಗಳೆಂದರೆ: ಪೊಲೆಂಡ್‌ನ ಅಗ್ನೆಸ್ಕಾ ರಾಂಡ್ವಾಂಸ್ಕಾ 5ನೆ ಸ್ಥಾನ(10.2 ಮಿಲಿಯನ್ ಡಾಲರ್)ದಲ್ಲಿದ್ದರೆ, ಡೇನ್ ಕಾರೊಲಿನ್ ವೋಝಿಯಾಕಿ(8 ಮಿಲಿಯನ್ ಡಾಲರ್), ಫ್ರೆಂಚ್ ಓಪನ್ ಚಾಂಪಿಯನ್ ಸ್ಪೇನ್‌ನ ಗಾರ್ಬೈನ್ ಮುಗುರುಝಾ(7.6 ಮಿಲಿಯನ್ ಡಾಲರ್), ಸರ್ಬಿಯದ ಅನಾ ಇವಾನೊವಿಕ್(7.4 ಮಿಲಿಯನ್ ಡಾಲರ್),ಬೆಲಾರಸ್‌ನ ವಿಕ್ಟೋರಿಯ ಅಝರೆಂಕಾ(6.6 ಮಿಲಿಯನ್ ಡಾಲರ್) ಹಾಗೂ ಕೆನಡಾದ ಎವ್‌ಜಿನಿ ಬೌಚಾರ್ಡ್(6.2 ಮಿಲಿಯನ್ ಡಾಲರ್) ಬಳಿಕದ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News