×
Ad

ಕೋಪಾ ಅಮೆರಿಕ ಕಪ್ ಫುಟ್ಬಾಲ್ ಟೂರ್ನಿ:ಚಾಂಪಿಯನ್ ಚಿಲಿ ವಿರುದ್ಧ ಅರ್ಜೆಂಟೀನಕ್ಕೆ ಜಯ

Update: 2016-06-07 23:38 IST

ಸಾಂಟಾಕ್ಲಾರಾ, ಜೂ.7: ಸ್ಟಾರ್ ಆಟಗಾರ ಹಾಗೂ ನಾಯಕ ಲಿಯೊನೆಲ್ ಮೆಸ್ಸಿ ಅನುಪಸ್ಥಿತಿಯಲ್ಲೂ ಕೋಪಾ ಅಮೆರಿಕ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚಿಲಿ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿರುವ ಅರ್ಜೆಂಟೀನ ತಂಡ ಪ್ರತಿಷ್ಠಿತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನದ ಪರ ಏಂಜಲ್ ಡಿ ಮಾರಿಯಾ(51ನೆ ನಿಮಿಷ) ಹಾಗೂ ಎವರ್ ಬನೆಗಾ (59ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಈ ಗೆಲುವಿನೊಂದಿಗೆ ಅರ್ಜೆಂಟೀನ 3 ಅಂಕ ಗಳಿಸಿದೆ. ಮಾತ್ರವಲ್ಲ ಕಳೆದ ವರ್ಷ ಕೋಪಾ ಅವೆುರಿಕ ಟೂರ್ನಿಯ ಫೈನಲ್‌ನಲ್ಲಿ ಸೋತಿರುವುದಕ್ಕೆ ಸೇಡು ತೀರಿಸಿಕೊಂಡಿದೆ.

ಹಾಲಿ ಚಾಂಪಿಯನ್ ಚಿಲಿಯ ಪರ ಬದಲಿ ಆಟಗಾರ ಜೋಸ್ ಫುಯೆನ್‌ಝಲಿಡಾ ಇಂಜುರಿ ಟೈಮ್‌ನಲ್ಲಿ ಸಮಾಧಾನಕರ ಗೋಲು ಬಾರಿಸಿದರು.

ಮುಂದಿನ ಪಂದ್ಯಗಳಲ್ಲಿ ಪನಾಮಾ ಹಾಗೂ ಬೊಲಿವಿಯಾ ತಂಡಗಳನ್ನು ಎದುರಿಸಲಿರುವ ಅರ್ಜೆಂಟೀನ ಡಿ ಗುಂಪಿನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿರುವ ಫೇವರಿಟ್ ತಂಡ ಎನಿಸಿಕೊಂಡಿದೆ.

ಕಳೆದ ತಿಂಗಳು ಹೊಂಡುರಾಸ್ ತಂಡ ವಿರುದ್ಧದ ಸೌಹಾರ್ದ ಪಂದ್ಯದ ವೇಳೆ ಬೆನ್ನುನೋವಿಗೆ ಒಳಗಾಗಿದ್ದ ಮೆಸ್ಸಿ ಕೋಪಾ ಅಮೆರಿಕ ಟೂರ್ನಿಯ ಮೊದಲ ಪಂದ್ಯಕ್ಕೆ ಚೇತರಿಸಿಕೊಳ್ಳಲು ವಿಫಲರಾದರು. ಈ ಹಿನ್ನೆಲೆಯಲ್ಲಿ ಅವರು ಪಂದ್ಯದಲ್ಲಿ ಆಡದೇ ಬೆಂಚ್ ಬಿಸಿ ಮಾಡಿದರು.

ಬಾರ್ಸಿಲೋನದ ಸೂಪರ್ ಸ್ಟಾರ್ ಮೆಸ್ಸಿಯ ಅನುಪಸ್ಥಿತಿ ಅರ್ಜೆಂಟೀನದ ಪ್ರದರ್ಶನದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಲಿಲ್ಲ.

ಪಂದ್ಯದ ಮೊದಲಾರ್ಧದಲ್ಲಿ ಅರ್ಜೆಂಟೀನ ತಂಡ ಗೋಲು ಗಳಿಸಲು ಪ್ರಯತ್ನ ನಡೆಸಿತು. ಅರ್ಜೆಂಟೀನ 22ನೆ ನಿಮಿಷದಲ್ಲಿ ಮುನ್ನಡೆ ಸಾಧಿಸಲು ವಿಫಲ ಯತ್ನ ನಡೆಸಿತು. ಚಿಲಿ ತಂಡ 30ನೆ ನಿಮಿಷದಲ್ಲಿ ಗೋಲು ಬಾರಿಸುವ ಉತ್ತಮ ಅವಕಾಶ ಪಡೆದಿತ್ತು. ಅರ್ಜೆಂಟೀನದ ಗೋಲುಕೀಪರ್ ಸೆರ್ಜಿಯೊ ರೊಮೆರೊ ಗೋಲು ನಿರಾಕರಿಸಿದರು.

 ಅರ್ಜೆಂಟೀನ 51ನೆ ನಿಮಿಷದಲ್ಲಿ ಎವೆರ್ ಬನೆಗಾ ಬಾರಿಸಿದ ಗೋಲಿನ ನೆರವಿನಿಂದ ಕೊನೆಗೂ ಗೋಲು ಖಾತೆ ತೆರೆಯಿತು. 59ನೆ ನಿಮಿಷದಲ್ಲಿ ಡಿ ಮಾರಿಯ ಅರ್ಜೆಂಟೀನದ ಮುನ್ನಡೆಯನ್ನು 2-0ಗೆ ಏರಿಸಿದರು.

ಇಂಜುರಿ ಟೈಮ್‌ನಲ್ಲಿ ಚಿಲಿಯ ಫುಯೆನ್‌ಝಾಲಿಡಾ ಫ್ರಿ-ಕಿಕ್‌ನ ಮೂಲಕ ಗೋಲು ಬಾರಿಸಿದರು. ಆದರೆ, ಅದಾಗಲೇ ಅರ್ಜೆಂಟೀನ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News