ದ್ರಾವಿಡ್-ಗಂಗುಲಿಯ ದಾಖಲೆ ಮುರಿದ ಲಂಬ್-ವೆಸ್ಸೆಲ್ಸ್
ಇಂಗ್ಲೆಂಡ್ ಕೌಂಟಿ ಪಂದ್ಯದಲ್ಲಿ ದಾಖಲೆಗಳ ನಿರ್ಮಾಣ
ನಾಟಿಂಗ್‌ಹ್ಯಾಮ್, ಜೂ.7: ನಾಟಿಂಗ್‌ಹ್ಯಾಮ್‌ಶೈರ್‌ನ ಟ್ರೆಂಟ್‌ಬ್ರಿಡ್ಜ್ ಗ್ರೌಂಡ್‌ನಲ್ಲಿ ಸೋಮವಾರ ನಡೆದ ಲೀಸ್ಟ್ ಎ ಏಕದಿನ ಪಂದ್ಯದಲ್ಲಿ ಎರಡು ದಾಖಲೆಗಳು ಮೂಡಿಬಂದವು. ಈ ಪಂದ್ಯದಲ್ಲ್ಲಿ ಮೈಕಲ್ ಲಂಬ್ ಹಾಗೂ ರಿಕಿ ವೆಸ್ಸೆಲ್ಸ್ ಗರಿಷ್ಠ ಜೊತೆಯಾಟ ನಡೆಸಿ 17 ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗುಲಿ ಏಕದಿನ ಪಂದ್ಯದಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
ನಾಟಿಂಗ್‌ಹ್ಯಾಮ್ ಶೈರ್ ಹಾಗೂ ನಾರ್ಥಂಪ್ಟನ್‌ಶೈರ್ ತಂಡಗಳ ನಡುವೆ ನಡೆದ ರಾಯಲ್ ಲಂಡನ್ ಏಕದಿನ ಕಪ್ ಪಂದ್ಯ ಹೊಸ ದಾಖಲೆಗಳಿಗೆ ಸಾಕ್ಷಿಯಾಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ನಾರ್ಥಂಪ್ಟನ್‌ಶೈರ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 445 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನಾರ್ಥಂಟ್ಸ್ ತಂಡ 425 ರನ್ ಗಳಿಸಿ ಕೇವಲ 20 ರನ್‌ಗಳ ಅಂತರದಿಂದ ಸೋಲುಂಡಿತು. ಉಭಯ ತಂಡಗಳು ಒಟ್ಟು 870 ರನ್ ಗಳಿಸಿದ್ದು, ಇನ್ನು 2 ರನ್ ಗಳಿಸುತ್ತಿದ್ದರೆ ವಿಶ್ವ ದಾಖಲೆ ನಿರ್ಮಾಣವಾಗುತ್ತಿತ್ತು.
ನಾಟಿಂಗ್‌ಹ್ಯಾಮ್‌ಶೈರ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಿಕಿ ವೆಸ್ಸೆಲ್ಸ್ ಹಾಗೂ ಮೈಕಲ್ ಲಂಬ್ 39.2 ಓವರ್‌ಗಳಲ್ಲಿ 342 ರನ್ ಜೊತೆಯಾಟ ನಡೆಸಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದರು. ಭರ್ಜರಿ ಜೊತೆಯಾಟ ನಡೆಸಿರುವ ವೆಸ್ಸೆಲ್ ಹಾಗೂ ಲಂಬ್ 1999ರಲ್ಲಿ ಟೌಂಟನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಶ್ರೀಲಂಕಾದ ವಿರುದ್ಧ 318 ರನ್ ಜೊತೆಯಾಟ ನಡೆಸಿದ್ದ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗುಲಿ ಅವರ ದಾಖಲೆಯನ್ನು ಮುರಿದರು. ದ್ರಾವಿಡ್ ಹಾಗೂ ಗಂಗುಲಿ ಆ ಕಾಲದಲ್ಲಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ದಾಖಲಿಸಿದ್ದ ಗರಿಷ್ಠ ಜೊತೆಯಾಟವಾಗಿತ್ತು.
ಲಂಬ್ ಹಾಗೂ ವೆಸ್ಸೆಲ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಜೊತೆಯಾಟದ ದಾಖಲೆ ಮುರಿಯಲು 30 ರನ್ ಕೊರತೆ ಉಂಟಾಯಿತು. 2015ರ ಫೆಬ್ರವರಿಯಲ್ಲಿ ಮನುಕಾ ಓವಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ವಿಂಡೀಸ್‌ನ ಕ್ರಿಸ್ ಗೇಲ್ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್ ಝಿಂಬಾಬ್ವೆ ವಿರುದ್ಧ 332 ರನ್ ಜೊತೆಯಾಟ ನಡೆಸಿ ಏಕದಿನದಲ್ಲಿ ಸಾರ್ವಕಾಲಿಕ ಶ್ರೇಷ್ಠ ಜೊತೆಯಾಟ ನಡೆಸಿದ್ದರು.
ವೆಸ್ಸೆಲ್ಸ್(146 ರನ್, 97 ಎಸೆತ, 14 ಬೌಂಡರಿ,8 ಸಿಕ್ಸರ್) ಹಾಗೂ ಲಂಬ್(184 ರನ್, 150 ಎಸೆತ, 21 ಬೌಂಡರಿ, 6 ಸಿಕ್ಸರ್) ವೃತ್ತಿಜೀವನದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. ಲಂಬ್ ಏಕದಿನದಲ್ಲಿ 5ನೆ ಬಾರಿ ಶತಕ ಬಾರಿಸಿದರು. ಅವರು 2014ರಲ್ಲಿ ವಿಂಡೀಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ 106 ರನ್ ಗಳಿಸಿದ್ದರು.
2009ರ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ಲಂಬ್ ಶತಕ ಬಾರಿಸಿದ್ದಾರೆ. 184 ರನ್ ಗಳಿಸಿರುವ ಲಂಬ್ 1993ರಲ್ಲಿ ಔಟಾಗದೆ 167 ರನ್ ಗಳಿಸಿದ್ದ ಪಾಲ್ ಜಾನ್ಸನ್ ದಾಖಲೆ ಮುರಿದರು. 36ರ ಹರೆಯದ ಲಂಬ್ ಇಂಗ್ಲೆಂಡ್‌ನ ಪರ 3 ಏಕದಿನ ಹಾಗೂ 27 ಟ್ವೆಂಟಿ-20 ಪಂದ್ಯ ಆಡಿದ್ದಾರೆ. 30ರ ಹರೆಯದ ವೆಸ್ಸೆಲ್ಸ್ ಇನ್ನಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡಬೇಕಾಗಿದೆ.
50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 445 ರನ್ ಗಳಿಸಿರುವ ನಾಟಿಂಗ್‌ಹ್ಯಾಮ್ ಶೈರ್ ತಂಡ ಲೀಸ್ಟ್ ಎ ಪಂದ್ಯಗಳಲ್ಲಿ ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿತು. 2007ರಲ್ಲಿ ದಿ ಓವಲ್‌ನಲ್ಲಿ ಸರ್ರೆ ತಂಡ ಗ್ಲೌಸೆಸ್ಟರ್‌ಶೈರ್ ವಿರುದ್ಧ 4 ವಿಕೆಟ್‌ಗೆ 496 ರನ್ ಗಳಿಸಿತ್ತು.
ಪಂದ್ಯದ ಹೈಲೈಟ್ಸ್
342: ಇಂಗ್ಲೆಂಡ್‌ನಲ್ಲಿ ನಡೆದ ಲೀಸ್ಟ್ ಎ ಪಂದ್ಯದಲ್ಲಿ ದಾಖಲಾದ ಗರಿಷ್ಠ ಜೊತೆಯಾಟ.
445: ಲೀಸ್ಟ್ ಎ ಪಂದ್ಯದಲ್ಲಿ ತಂಡವೊಂದರಿಂದ ದಾಖಲಾದ ಎರಡನೆ ಗರಿಷ್ಠ ಸ್ಕೋರ್.
870: ಇಂಗ್ಲೆಂಡ್‌ನಲ್ಲಿ ಲೀಸ್ಟ್ ಎ ಪಂದ್ಯದಲ್ಲಿ ಉಭಯ ತಂಡಗಳಿಂದ ದಾಖಲಾದ ಒಟ್ಟು ಸ್ಕೋರ್. ವಿಶ್ವ ದಾಖಲೆಗೆ ಎರಡೇ ರನ್ ಕೊರತೆ.