ರಿಯೋ ಗೇಮ್ಸ್‌:ವೈಲ್ಡ್‌ಕಾರ್ಡ್ ಪಡೆಯುವ ವಿಶ್ವಾಸದಲ್ಲಿ ಮೇರಿಕೋಮ್

Update: 2016-06-07 18:13 GMT

ಬೆಂಗಳೂರು, ಜೂ.7: ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಮುಂಬರುವ ರಿಯೋ ಗೇಮ್ಸ್‌ಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಗಿಟ್ಟಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ‘‘ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಹಾಗೂ ಎಐಬಿಎ ಹಂಗಾಮಿ ಸಮಿತಿ ತನಗೆ ವೈಲ್ಡ್‌ಕಾರ್ಡ್ ಲಭಿಸುವಂತೆ ಮಾಡಲು ಸರ್ವ ಪ್ರಯತ್ನ ನಡೆಸುತ್ತಿದ್ದು, ಮುಂದೇನುನಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ನನಗೆ ಇತ್ತೀಚೆಗಷ್ಟೇ ವೈಲ್ಡ್‌ಕಾರ್ಡ್ ಸಿಗುವ ಸಾಧ್ಯತೆ ಬಗ್ಗೆ ಗೊತ್ತಾಯಿತು. ಈ ವಿಷಯ ಕೇಳಿ ತುಂಬಾ ಸಂತೋಷವಾಯಿತು. ನನಗೆ ಅವಕಾಶ ಲಭಿಸಿದರೆ, ರಿಯೋ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಫಿಟ್‌ನೆಸ್ ಕಾಯ್ದುಕೊಳ್ಳುವೆ’’ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೇರಿ ಕೋಮ್ ಸುದ್ದಿಗಾರರಿಗೆ ತಿಳಿಸಿದರು.

 ಕಝಕಿಸ್ತಾನದಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೆ ಸುತ್ತಿನಲ್ಲೇ ಹೊರ ನಡೆದು ನಿರಾಸೆ ಮೂಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಮೇರಿಕೋಮ್,‘‘ಅದು ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯವಾಗಿತ್ತು. ನಾನು ಗೆಲ್ಲುತ್ತೇನೆಂದು ಭಾವಿಸಿದ್ದೆ. ನಾನು ಉತ್ತಮ ಪ್ರದರ್ಶನ ನೀಡಿದರೂ ಫಲಿತಾಂಶ ನನ್ನ ವಿರುದ್ಧವಾಗಿ ಬಂತು’’ ಎಂದರು.

ನ್ಯಾಶನಲ್ ಬಾಕ್ಸಿಂಗ್ ಫೆಡರೇಶನ್ ಅಸ್ತಿತ್ವದಲ್ಲಿರದ ಬಗ್ಗೆ ಬಾಕ್ಸರ್‌ಗಳು ಹಾಗೂ ಕೋಚ್‌ಗಳು ಹತಾಶೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಮೇರಿಕೋಮ್,‘‘ ನಮ್ಮಲ್ಲಿ ಫೆಡರೇಶನ್ ಇಲ್ಲದಿದ್ದರೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡದೇ ಇರುವುದು ಉತ್ತಮ. ನಮಗೆ ಫೆಡರೇಶನ್ ಇಲ್ಲದೇ ಇರುವ ಬಗ್ಗೆ ಎಲ್ಲ ಬಾಕ್ಸರ್‌ಗಳು ಹಾಗೂ ಕೋಚ್‌ಗಳು ಭಾರೀ ನಿರಾಸೆಗೊಂಡಿದ್ದಾರೆ. ನಮ್ಮ ರಾಷ್ಟ್ರಧ್ವಜ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಹಾರಾಡದೇ ಇದ್ದರೆ ಅಲ್ಲಿ ಸ್ಪರ್ಧಿಸಿ ಏನು ಪ್ರಯೋಜನ. ನಾವು ಚಿನ್ನ ಗೆದ್ದಾಗ ಅಲ್ಲಿ ನಮ್ಮ ರಾಷ್ಟ್ರ ಧ್ವಜ ಇಲ್ಲದೇ ಇದ್ದರೆ ತುಂಬಾ ಬೇಸರವಾಗುತ್ತದೆ. ಆದಷ್ಟು ಬೇಗನೆ ಫೆಡರೇಶನ್ ರಚನೆಯಾಗುವ ವಿಶ್ವಾಸ ನನಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News