ಏಷ್ಯನ್ ಫುಟ್ಬಾಲ್ ಕಪ್‌ಗೆ ಭಾರತ ಅರ್ಹತೆ
Update: 2016-06-07 23:47 IST
ಗುವಾಹಟಿ, ಜೂ.7: ಸ್ಟ್ರೈಕರ್ ಜೇಜೆ ಲಾಲ್‌ಪೆಕುಲ್ವಾ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತದ ಫುಟ್ಬಾಲ್ ತಂಡ ಲಾವೊಸ್ ತಂಡವನ್ನು 6-1 ಗೋಲುಗಳ ಅಂತರದಿಂದ ಹೀನಾಯವಾಗಿ ಸೋಲಿಸಿ 2019ರ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.
ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ 16ನೆ ನಿಮಿಷದಲ್ಲಿ 0-1 ಹಿನ್ನಡೆಯಲ್ಲಿತ್ತು. ಆಗ ಭಾರತದ ನೆರವಿಗೆ ಮುಂದಾದ ಲಾಲ್‌ಪೆಕುಲ್ವಾ(42ನೆ, 74ನೆ ನಿಮಿಷ) ಅವಳಿ ಗೋಲು, ಸುಮೀತ್ ಪಾಸ್ಸಿ(45ನೆ ನಿ.), ಸಂದೇಶ್ ಜಿಂಗಾನ್(49ನೆ ನಿ.), ಮುಹಮ್ಮದ್ ರಫೀಕ್(83ನೆ ನಿ.) ಹಾಗೂ ಫಲ್ಗೊಂಕೊ ಕಾರ್ಡೊರೊ(87ನೆ ನಿಮಿಷ) ತಲಾ ಒಂದು ಗೋಲು ಬಾರಿಸಿ ಭರ್ಜರಿ ಗೆಲುವಿಗೆ ನೆರವಾದರು.
ಭಾರತ ಜೂ.2ರಂದು ವಿಯೆಟ್ನಾಂನಲ್ಲಿ ನಡೆದ ಮೊದಲ ಹಂತದ ಪಂದ್ಯದಲ್ಲಿ ಲಾವೊಸ್ ತಂಡವನ್ನು 1-0 ಅಂತರದಿಂದ ಮಣಿಸಿತ್ತು. ಇದೀಗ ಒಟ್ಟು 7-1 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಭಾರತ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆದಿದೆ.