ಶ್ರೀಲಂಕಾ ಏಕದಿನ ತಂಡಕ್ಕೆ ವಾಪಸಾದ ಫರ್ವೀಝ್ ಮಹರೂಫ್
ಕೊಲಂಬೋ, ಜೂ.8: ಶ್ರೀಲಂಕಾದ ಹಿರಿಯ ವೇಗದ ಬೌಲರ್ ಫರ್ವೀಝ್ ಮಹರೂಫ್ ನಾಲ್ಕು ವರ್ಷಗಳ ಬಿಡುವಿನ ಬಳಿಕ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ವಾಪಸಾಗಿದ್ದಾರೆ.
ಮಹರೂಫ್ ಮಾರ್ಚ್ 2012ರಲ್ಲಿ ಕೊನೆಯ ಬಾರಿ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಇದೀಗ 32ರ ಹರೆಯದ ಮಹರೂಫ್ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ.
ಶ್ರೀಲಂಕಾ ತಂಡ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಯಲ್ಲಿ ಆಡಲಿದೆ. ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡವನ್ನು ಮಹರೂಫ್ ಸೇರಿಕೊಳ್ಳಲಿದ್ದಾರೆ. ಇತರ ನಾಲ್ವರು ಆಟಗಾರರಾದ ಆಲ್‌ರೌಂಡರ್ ದನುಶ್ಕಾ ಗುಣತಿಲಕ, ಲೆಗ್ ಸ್ಪಿನ್ನರ್ ಸೀಕುಗೆ ಪ್ರಸನ್ನ, ಆಫ್ ಸ್ಪಿನ್ನರ್ ಸೂರಜ್ ರಣದೀವ್ ಹಾಗೂ ಬ್ಯಾಟ್ಸ್‌ಮನ್ ಉಪುಲ್ ತರಂಗ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ.
ಶ್ರೀಲಂಕಾ ತಂಡ ಜೂ.16 ಹಾಗೂ 18 ರಂದು ಐರ್ಲೆಂಡ್ ವಿರುದ್ಧ ಏಕದಿನ ಪಂದ್ಯ ಆಡಲಿದೆ. ಜೂ.21 ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಮಹರೂಫ್ ಲಂಕಾ ತಂಡಕ್ಕೆ ವಾಪಸಾಗಿದ್ದಾರೆ. ಮಹರೂಫ್ ಮಾ.20,2012ರಲ್ಲಿ ಢಾಕಾದಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು. ಆ ಪಂದ್ಯದಲ್ಲಿ ವಿಕೆಟ್ ಪಡೆಯಲು ವಿಫಲವಾಗಿದ್ದ ಮಹರೂಫ್ ಬ್ಯಾಟಿಂಗ್‌ನಲ್ಲೂ ವಿಫಲರಾಗಿದ್ದರು.
ಸ್ವಿಂಗ್ ಬೌಲಿಂಗ್‌ನ ಮೂಲಕ ಖ್ಯಾತಿ ಪಡೆದಿರುವ ಮಹರೂಫ್ ಜೂ.2011ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಒಟ್ಟು 11 ಟೆಸ್ಟ್ ಹಾಗೂ 104 ಏಕದಿನ ಪಂದ್ಯಗಳನ್ನು ಆಡಿರುವ ಅವರು ಕ್ರಮವಾಗಿ 25 ಹಾಗೂ 133 ವಿಕೆಟ್‌ಗಳನ್ನು ಪಡೆದಿದ್ದಾರೆ.