ಪಾಕ್ ವೇಗಿ ಆಮಿರ್‌ಗೆ ಅಕ್ರಂ ಬೆಂಬಲ
ಕರಾಚಿ, ಜೂ.8: ಮುಂದಿನ ತಿಂಗಳು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಪಾಕಿಸ್ತಾನ ತಂಡಕ್ಕೆ ಆಯ್ಕೆಯಾಗಿರುವ ವೇಗದ ಬೌಲರ್ ಮುಹಮ್ಮದ್ ಆಮಿರ್‌ಗೆ ಮಾಜಿ ನಾಯಕ ವಸೀಂ ಅಕ್ರಂ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜು.14 ಹಾಗೂ ಸೆಪ್ಟಂಬರ್ 7ರ ನಡುವೆ ನಡೆಯಲಿರುವ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ನಾಲ್ಕು ಟೆಸ್ಟ್, ಐದು ಏಕದಿನ ಹಾಗೂ ಟ್ವೆಂಟಿ-20 ಅಂತಾರಾಷ್ಟ್ರೀಯ ಸರಣಿಗೆ ಯುವ ವೇಗದ ಬೌಲರ್ ಆಮಿರ್ ಪಾಕಿಸ್ತಾನ ತಂಡಕ್ಕೆ ಆಯ್ಕೆಯಾಗಿದ್ದಾರೆ.
2010ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಉದ್ದೇಶಪೂರ್ವಕವಾಗಿ ನೋ-ಬಾಲ್ ಎಸೆದು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಆಮಿರ್ ಐದು ವರ್ಷಗಳ ಕಾಲ ಜೈಲು ಸಜೆ ಅನುಭವಿಸಿದ್ದರು.
24ರ ಹರೆಯದ ಆಮಿರ್ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಎಲ್ಲ ಆರೋಪಗಳಿಂದ ದೋಷಮುಕ್ತರಾಗಿ ಕ್ರಿಕೆಟ್‌ಗೆ ವಾಪಸಾಗಿದ್ದರು. ಅಮಾನತುಗೊಂಡ ಬಳಿಕ ಮೊದಲ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿರುವ ಆಮಿರ್ ಇಂಗ್ಲೆಂಡ್‌ನ ಸಂಬಂಧಪಟ್ಟ ಅಧಿಕಾರಿಗಳಿಂದ ವೀಸಾ ನಿರೀಕ್ಷೆಯಲ್ಲಿದ್ದಾರೆ.
ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸು.. ಉಳಿದ ವಿಷಯವನ್ನು ಮರೆತು ಬಿಡು ಎಂದು ನಾನು ಆಮಿರ್‌ಗೆ ತಿಳಿಸಿರುವೆ. ಆತ ಅತ್ಯುತ್ತಮ ಬೌಲರ್ ಹಾಗೂ ಪಾಕಿಸ್ತಾನ ಕ್ರಿಕೆಟ್‌ನ ಭವಿಷ್ಯದ ಆಟಗಾರ ಎಂದು ಟಿವಿ ಚಾನಲ್‌ಗೆ ಅಕ್ರಂ ತಿಳಿಸಿದ್ದಾರೆ.
ಪಾಕಿಸ್ತಾನಿ ಬೌಲರ್‌ಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಸ್ಪರ್ಧಿಸುವ ಇಚ್ಛೆ ಇದ್ದರೆ ಬಿರಿಯಾನಿಯನ್ನು ಹೆಚ್ಚು ತಿನ್ನುವುದನ್ನು ಬಿಡಬೇಕು ಎಂದು ಜೂ.3 ರಂದು 50ನೆ ವರ್ಷಕ್ಕೆ ಕಾಲಿಟ್ಟಿರುವ ಸುಲ್ತಾನ್ ಆಫ್ ಸ್ವಿಂಗ್ ಖ್ಯಾತಿಯ ಅಕ್ರಂ ಸಲಹೆ ನೀಡಿದರು.
ವೇಗ ಹಾಗೂ ಸ್ವಿಂಗ್ ಬೌಲಿಂಗ್‌ನ ಮೂಲಕ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗೆ ಸಿಂಹಸ್ವಪ್ನರಾಗಿದ್ದ ಅಕ್ರಂ 1984 ರಿಂದ 2003ರ ತನಕ ವೃತ್ತಿಜೀವನದಲ್ಲಿ 414 ಟೆಸ್ಟ್ ಹಾಗೂ 502 ಏಕದಿನ ವಿಕೆಟ್‌ಗಳನ್ನು ಕಬಳಿಸಿದ್ದಾರೆ.