×
Ad

ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿ: ಕೊಲಂಬಿಯಾ ಕ್ವಾರ್ಟರ್‌ಫೈನಲ್‌ಗೆ

Update: 2016-06-08 23:38 IST

ಪಾಸೆಡೆನಾ(ಕ್ಯಾಲಿಫೋರ್ನಿಯ), ಜೂ.8: ಪರಾಗ್ವೆ ತಂಡದ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿರುವ ಕೊಲಂಬಿಯಾ ತಂಡ ನೂರನೆ ಆವೃತ್ತಿಯ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಗ್ರೂಪ್ ಎ ಪಂದ್ಯದಲ್ಲಿ ತಲಾ ಒಂದು ಗೋಲು ಬಾರಿಸಿದ ಕಾರ್ಲಸ್ ಬಾಕಾ ಹಾಗೂ ಜೇಮ್ಸ್ ರೊಡ್ರಿಗಝ್ ಕೊಲಂಬಿಯಾ ಅಂತಿಮ 8ರ ಘಟ್ಟ ಪ್ರವೇಶಿಸಲು ನೆರವಾದರು. ನಾಯಕ ರೊಡ್ರಿಗಝ್ ಸತತ ಎರಡನೆ ಪಂದ್ಯದಲ್ಲಿ ಕೊಲಂಬಿಯಾದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಗೋಲ್‌ಕೀಪರ್ ಡೇವಿಡ್ ಒಸ್ಪಿನಾ ಉತ್ತಮ ಪ್ರದರ್ಶನದಿಂದ ಗಮನ ಸೆಳೆದರು.

ಎಸಿ ಮಿಲನ್ ಸ್ಟ್ರೈಕರ್ ಬಾಕಾ 12ನೆ ನಿಮಿಷದಲ್ಲಿ ಜೇಮ್ಸ್ ರೊಡ್ರಿಗಝ್ ನೀಡಿದ ಕಾರ್ನರ್ ಕಿಕ್‌ನ ನೆರವಿನಿಂದ ಚೆಂಡನ್ನು ಹೆಡರ್‌ನ ಮೂಲಕ ಗೋಲು ಪೆಟ್ಟಿಗೆಗೆ ಸೇರಿಸುವುದರೊಂದಿಗೆ ಕೊಲಂಬಿಯಾಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಭುಜ ನೋವನ್ನು ಲೆಕ್ಕಿಸದೇ ಆಡಿದ ಸ್ಟಾರ್ ಫುಟ್ಬಾಲ್ ಆಟಗಾರ ರೊಡ್ರಿಗಝ್ 30ನೆ ನಿಮಿಷದಲ್ಲಿ ಕೊಲಂಬಿಯಾದ ಮುನ್ನಡೆಯನ್ನು 2-0ಗೆ ಏರಿಸಿದರು.

 ಪರಾಗ್ವೆ ತಂಡಕ್ಕೆ ಗೋಲು ಬಾರಿಸಲು ಹಲವು ಅವಕಾಶ ಲಭಿಸಿತ್ತು. ಆದರೆ, ಕೆಲವು ಬಾರಿ ಆಟಗಾರರು ಗೋಲು ಬಾರಿಸಲು ಯತ್ನಿಸಿದರೂ ಅದೃಷ್ಟ ಕೈಕೊಟ್ಟಿತು. 71ನೆ ನಿಮಿಷದಲ್ಲಿ ಪರಾಗ್ವೆ ಗೋಲು ಬಾರಿಸಲು ಸಫಲವಾಯಿತು. ವಿಕ್ಟರ್ ಅಯಾಲಾ ಪರಾಗ್ವೆ ಪರ ಏಕೈಕ ಗೋಲು ಬಾರಿಸಿದರು.

ಕಳೆದ ವಾರ ಆತಿಥೇಯ ಅಮೆರಿಕದ ವಿರುದ್ಧ 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ್ದ ಕೊಲಂಬಿಯಾ ಎ ಗುಂಪಿನಲ್ಲಿ ಅಜೇಯವಾಗುಳಿದಿದೆ. ಆ ಪಂದ್ಯದಲ್ಲಿ ರೊಡ್ರಿಗಝ್ ಒಂದು ಗೋಲು ಬಾರಿಸಿದ್ದರು.

ಈ ಪಂದ್ಯದಲ್ಲಿ ಮೂರು ಅಂಕವನ್ನು ಗಳಿಸಿರುವ ಕೊಲಂಬಿಯಾ ಎ ಗುಂಪಿನಲ್ಲಿ ಎರಡನೆ ಸ್ಥಾನಿಯಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಶನಿವಾರ ನಡೆಯಲಿರುವ ಕೋಸ್ಟಾರಿಕಾ ವಿರುದ್ಧದ ಪಂದ್ಯವನ್ನು ಡ್ರಾಗೊಳಿಸಿದರೆ ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಲಿದೆ.

ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರೆ ಬಿ ಗುಂಪಿನಲ್ಲಿ 2ನೆ ಸ್ಥಾನ ಪಡೆಯಲಿರುವ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಎದುರಿಸಲಿದೆ. ಬಿ ಗುಂಪಿನಲ್ಲಿ ಬ್ರೆಝಿಲ್, ಇಕ್ವಾಡಾರ್, ಹೈಟಿ ಹಾಗೂ ಪೆರು ತಂಡಗಳಿವೆ.

ಅಮೆರಿಕಕ್ಕೆ ಭರ್ಜರಿ ಜಯ:

 ಮಂಗಳವಾರ ನಡೆದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡ ಕೋಸ್ಟಾರಿಕಾ ತಂಡವನ್ನು 4-0 ಗೋಲುಗಳ ಅಂತರದಿಂದ ಮಣಿಸಿ ಗೆಲುವಿನ ಹಳಿಗೆ ಮರಳಿದೆ.

ಕ್ಲಿಂಟ್ ಡೆಂಪ್‌ಸೆ,(9ನೆ ನಿಮಿಷ), ಜೆರ್ಮೈನ್ ಜೋನ್ಸ್ (37ನೆ ನಿಮಿಷ), ಬಾಬಿ ವುಡ್(42ನೆ ನಿಮಿಷ) ಹಾಗೂ ಗ್ರಹಾಂ ಝುಸಿ(87ನೆ ನಿಮಿಷ) ತಲಾ ಒಂದು ಗೋಲು ಬಾರಿಸಿ ಅಮೆರಿಕದ ಭರ್ಜರಿ ಗೆಲುವಿಗೆ ನೆರವಾದರು.

ಆರಂಭದಲ್ಲಿ ಪೆನಾಲ್ಟಿ ಕಾರ್ನರ್‌ನ ಮೂಲಕ 50ನೆ ಅಂತಾರಾಷ್ಟ್ರೀಯ ಗೋಲು ಬಾರಿಸಿದ ಡೆಂಪ್‌ಸೆ ಶುಕ್ರವಾರ ಕೊಲಂಬಿಯಾ ವಿರುದ್ಧ 2-0 ಗೋಲುಗಳ ಅಂತರದಿಂದ ಸೋತಿದ್ದ ತಂಡ ಗೆಲುವಿನ ಹಳಿಗೆ ಮರಳಲು ನೆರವಾದರು.

 ಈ ಗೆಲುವು ಅಮೆರಿಕದ ಕೋಚ್ ಜುರ್ಗೆನ್ ಕ್ಲಿನ್ಸ್‌ಮನ್‌ಗೆ ಸಮಾಧಾನ ತಂದಿದೆ. ಅಮೆರಿಕ ಕ್ಲಿನ್ಸ್‌ಮನ್ ಮಾರ್ಗದರ್ಶನದಲ್ಲಿ ಕಳೆದ 9 ತಿಂಗಳಿಂದ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಎಲ್ಲೆಡೆಯಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.

ಅಮೆರಿಕ ತಂಡ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಪರಾಗ್ವೆ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಜಯಿಸಿದರೆ ಕ್ವಾರ್ಟರ್‌ಫೈನಲ್‌ಗೆ ತನ್ನ ಸ್ಥಾನ ಖಚಿತಪಡಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News