ಯುರೋ ಕಪ್ ಅಭ್ಯಾಸ ಪಂದ್ಯ: ಜಾರ್ಜಿಯಾಗೆ ಶರಣಾದ ಸ್ಪೇನ್
ಮ್ಯಾಡ್ರಿಡ್, ಜೂ.8: ಫ್ರಾನ್ಸ್‌ನಲ್ಲಿ ಮುಂದಿನ ವಾರ ಆರಂಭವಾಗಲಿರುವ ಯುರೋ ಕಪ್ 2016ರ ಟೂರ್ನಿಗೆ ಸಜ್ಜಾಗುತ್ತಿರುವ ಸ್ಪೇನ್ ತಂಡ ತನ್ನ ಅಂತಿಮ ಅಭ್ಯಾಸ ಪಂದ್ಯದಲ್ಲಿ ಜಾರ್ಜಿಯಾ ವಿರುದ್ಧ 1-0 ಗೋಲುಗಳ ಅಂತರದಿಂದ ಸೋಲುವುದರೊಂದಿಗೆ ಹಿನ್ನಡೆ ಕಂಡಿದೆ.
39ನೆ ನಿಮಿಷದಲ್ಲಿ ಗೋಲು ಬಾರಿಸಿರುವ ಟಾರ್ನಿಕ್ ಒಕ್ರಿಯಶ್ವಿಲಿ ಸ್ಪೇನ್ ವಿರುದ್ಧ ಜಾರ್ಜಿಯಾಗೆ ಅಚ್ಚರಿ ಗೆಲುವು ತಂದುಕೊಡಲು ಕಾರಣರಾದರು.
ಕಳೆದ ಎರಡು ಯುರೋಪಿಯನ್ ಚಾಂಪಿಯನ್‌ಶಿಪ್ ಜಯಿಸಿರುವ ಸ್ಪೇನ್ ಮಾ.2015ರಲ್ಲಿ ಹಾಲೆಂಡ್ ವಿರುದ್ಧ ಸೌಹಾರ್ದ ಪಂದ್ಯವನ್ನು ಸೋತ ಬಳಿಕ ಯಾವುದೇ ಪಂದ್ಯವನ್ನು ಕಳೆದುಕೊಂಡಿಲ್ಲ.
ಯುರೋ ಕಪ್ ಟೂರ್ನಿಗೆ ಪೂರ್ವಭಾವಿಯಾಗಿ ನಡೆದ ಅಭ್ಯಾಸ ಪಂದ್ಯಗಳಲ್ಲಿ ಸ್ಪೇನ್ ತಂಡ ಬೋಸ್ನಿಯಾ ಹಾಗೂ ದಕ್ಷಿಣ ಕೊರಿಯಾ ವಿರುದ್ಧ ಸುಲಭ ಜಯಸಾಧಿಸಿತ್ತು. ಕೊನೆಯ ಪಂದ್ಯದಲ್ಲಿ ಜಾರ್ಜಿಯಾಗೆ ಶರಣಾಗಿ ಅಚ್ಚರಿ ಮೂಡಿಸಿದೆ.
ಕಳೆದ ವಾರ ದಕ್ಷಿಣ ಕೊರಿಯಾವನ್ನು 6-1 ಗೋಲುಗಳ ಅಂತರದಿಂದ ಮಣಿಸಿದ್ದ ಸ್ಪೇನ್ ತಂಡದಲ್ಲಿ ಕೋಚ್ ವಿನ್ಸೆಂಟ್ ಡಿ ಬಾಸ್ಕೊ 8 ಬದಲಾವಣೆ ಮಾಡಿದ್ದರು. ಆತಿಥೇಯ ಸ್ಪೇನ್ ತಂಡ ಗೋಲು ಬಾರಿಸಲು ಯತ್ನಿಸಿದರೂ ಜಾರ್ಜಿಯಾದ ಉತ್ತಮ ಪ್ರದರ್ಶನದ ಎದುರು ಮಂಕಾಗಿ ಹೋಯಿತು.
ಹಾಲಿ ಚಾಂಪಿಯನ್ ಸ್ಪೇನ್ ತಂಡ ಜೂ.13 ರಂದು ಝೆಕ್ ಗಣರಾಜ್ಯವನ್ನು ಎದುರಿಸುವ ಮೂಲಕ ಯುರೋ ಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಡಿ ಗುಂಪಿನಲ್ಲಿರುವ ಸ್ಪೇನ್ ತಂಡ ಟರ್ಕಿ ಹಾಗೂ ಕ್ರೊವೇಷಿಯ ತಂಡದ ವಿರುದ್ಧವೂ ಆಡಲಿದೆ.