ಆಸ್ಟ್ರೇಲಿಯ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಲು ದಕ್ಷಿಣ ಆಫ್ರಿಕ ಸಮ್ಮತಿ
ಅಡಿಲೇಡ್, ಜೂ.8: ಎಲ್ಲ ಗೊಂದಲಗಳಿಂದ ಹೊರ ಬಂದಿರುವ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡ ಈ ವರ್ಷ ಅಡಿಲೇಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯ ವಿರುದ್ಧ ಪಿಂಕ್ ಚೆಂಡಿನಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಲು ಒಪ್ಪಿಕೊಂಡಿದೆ. ಉಭಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಆಸ್ಟ್ರೇಲಿಯ ತಂಡ ಎಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕ ಹಾಗೂ ಪಾಕಿಸ್ತಾನದ ವಿರುದ್ಧ ತಲಾ ಒಂದು ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಲು ಯೋಜನೆ ಹಾಕಿಕೊಂಡಿತ್ತು. ಆದರೆ, ಆಟಗಾರರು ಕೆಲವು ಪ್ರಯೋಗದ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದರು. ಇದೀಗ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದ್ದು, ನವೆಂಬರ್ 24 ರಿಂದ 28ರ ತನಕ ಪಂದ್ಯ ನಡೆಯುವುದು ಖಚಿತವಾಗಿದೆ.
ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಹೊನಲು ಬೆಳಕಿನಲ್ಲೂ ಕಾಣಬಲ್ಲ ವಿಶೇಷವಾಗಿ ವಿನ್ಯಾಸಗೊಂಡಿರುವ ಪಿಂಕ್ ಚೆಂಡನ್ನು ಬಳಸಲಾಗುತ್ತದೆ. ಕಳೆದ ವರ್ಷ ಅಡಿಲೇಡ್‌ನಲ್ಲಿ ನ್ಯೂಝಿಲೆಂಡ್-ಆಸ್ಟ್ರೇಲಿಯ ನಡುವೆ ನಡೆದಿದ್ದ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯ 123,000 ಪ್ರೇಕ್ಷಕರನ್ನು ಆಕರ್ಷಿಸಿದ್ದು, ಟಿವಿಯಲ್ಲಿ ಸರಾಸರಿ 2 ಮಿಲಿಯನ್ ವೀಕ್ಷಕರು ಪಂದ್ಯವನ್ನು ವೀಕ್ಷಿಸಿದ್ದರು.
ಆದರೆ, ಎರಡೂ ತಂಡಗಳ ಆಟಗಾರರು ಪಿಂಕ್ ಚೆಂಡಿನ ಚಲನೆ ಹಾಗೂ ಬಾಳಿಕೆ ಬಗ್ಗೆ ಹಾಗೂ ಫ್ಲಡ್‌ಲೈಟ್‌ನಲ್ಲಿ ಪಿಂಕ್ ಚೆಂಡನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳು ಪರದಾಟ ನಡೆಸುತ್ತಿರುವ ಬಗ್ಗೆ ದೂರು ನೀಡಿದ್ದರು.
ದಕ್ಷಿಣ ಆಫ್ರಿಕ ತಂಡ ನ.3 ರಿಂದ ಮೊದಲ ಟೆಸ್ಟ್ ಆಡುವ ಮೂಲಕ ಆಸ್ಟ್ರೇಲಿಯ ಪ್ರವಾಸ ಆರಂಭಿಸಲಿದೆ. ಪಾಕಿಸ್ತಾನ ತಂಡ ಈ ವರ್ಷ ಆಸ್ಟ್ರೇಲಿಯದ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನುಆಡಲಿದ್ದು, ಬ್ರಿಸ್ಬೇನ್‌ನಲ್ಲಿ ಹಗಲು-ರಾತ್ರಿ ಪಂದ್ಯ ಆಡಲಿದೆ.