ಯುರೋ ಟೂರ್ನಿಗೆ ಉಗ್ರರ ಭೀತಿಯಿಲ್ಲ: ಆಯೋಜಕರು
ಪ್ಯಾರಿಸ್, ಜೂ.9: ಪ್ರತಿಷ್ಠಿತ ಯುರೋಪಿಯನ್ ಚಾಂಪಿಯನ್‌ಶಿಪ್ ಟೂರ್ನಿ ಶುಕ್ರವಾರ ಇಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಫ್ರಾನ್ಸ್ ತಂಡ ರೊಮಾನಿಯ ತಂಡವನ್ನು ಎದುರಿಸಲಿದೆ.
ಯುರೋ ಕಪ್ ಶುಕ್ರವಾರ ಆರಂಭವಾಗಿ ಜು.10ರ ತನಕ ನಡೆಯಲಿದ್ದು, ಒಟ್ಟು 24 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. 24 ತಂಡಗಳನ್ನು 6 ಗುಂಪುಗಳಾಗಿ ವಿಭಜಿಸಲಾಗಿದೆ. ಯುರೋಪಿಯನ್ ಚಾಂಪಿಯನ್‌ಶಿಪ್‌ಗೆ ಭಯೋತ್ಪಾದಕರ ಭೀತಿಯಿಲ್ಲ. ಈ ಟೂರ್ನಿಯನ್ನು ಸುರಕ್ಷಿತವಾಗಿ ಆಯೋಜಿಸುವ ವಿಶ್ವಾಸ ನಮಗಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.
ಯುರೋ 2016ರ ಸ್ಟೇಡಿಯಂ ಇಲ್ಲವೇ ಯಾವುದೇ ಸ್ಥಳಗಳಿಗೆ ಉಗ್ರರ ಭೀತಿ ಇಲ್ಲ ಎಂದು ಸ್ಪಷ್ಟ ಸಂದೇಶ ನೀಡುವೆ ಎಂದು ಯುರೋ 2016ರ ಆಯೋಜನಾ ಸಮಿತಿಯ ಅಧ್ಯಕ್ಷ ಜಾಕಸ್ ಲಾಂಬರ್ಟ್ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಪ್ಯಾರಿಸ್‌ನ ವಿವಿಧೆಡೆ ನಡೆದ ಉಗ್ರಗಾಮಿಗಳ ಸರಣಿ ಬಾಂಬು ಸ್ಪೋಟಕ್ಕೆ ದಾಳಿಗೆ 130 ಮಂದಿ ಸಾವನ್ನಪ್ಪಿದ್ದರು. ಇತ್ತೀಚೆಗೆ ಬುಸ್ಸೆಲ್ಸ್ ಮೇಲೆಯೂ ಉಗ್ರರ ದಾಳಿ ನಡೆದಿದ್ದು, ಯುರೋ ಕಪ್ ಉಗ್ರರ ಪ್ರಮುಖ ಗುರಿಯಾಗಿದೆ ಎನ್ನಲಾಗಿದೆ.