×
Ad

ಕೋಪಾ ಅಮೆರಿಕ ಟೂರ್ನಿ: ಕುಟಿನ್ಹೊ ಹ್ಯಾಟ್ರಿಕ್, ಬ್ರೆಝಿಲ್‌ಗೆ ಭರ್ಜರಿ ಜಯ

Update: 2016-06-09 23:02 IST

ಒರ್ಲಾಂಡೊ, ಜೂ.9: ಫಿಲಿಪ್ ಕುಟಿನ್ಹೊ ಬಾರಿಸಿದ ಆಕರ್ಷಕ ಹ್ಯಾಟ್ರಿಕ್ ಹಾಗೂ ರೆನಾಟೊ ಅಗಸ್ಟೊ ದಾಖಲಿಸಿದ ಅವಳಿ ಗೋಲುಗಳ ನೆರವಿನಿಂದ ಬ್ರೆಝಿಲ್ ತಂಡ ಕೋಪಾ ಅಮೆರಿಕ ಟೂರ್ನಿಯಲ್ಲಿ ಹೈಟಿ ತಂಡದ ವಿರುದ್ಧ 7-1 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

ಬುಧವಾರ ಇಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಭಾರೀ ಅಂತರದ ಗೆಲುವು ದಾಖಲಿಸಿರುವ ಬ್ರೆಝಿಲ್ 2 ಪಂದ್ಯಗಳಲ್ಲಿ ಒಟ್ಟು ನಾಲ್ಕು ಅಂಕವನ್ನು ಸಂಪಾದಿಸಿದೆ. ಈಕ್ವೆಡಾರ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೋಲು-ರಹಿತ ಡ್ರಾ ಸಾಧಿಸಿತ್ತು.

ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್ ರವಿವಾರ ನಡೆಯಲಿರುವ ಮೂರನೆ ಗ್ರೂಪ್ ಪಂದ್ಯದಲ್ಲಿ ಪೆರು ತಂಡವನ್ನು ಎದುರಿಸಲಿದೆ.

ಇದೇ ಮೊದಲ ಬಾರಿ ಕೋಪಾ ಅಮೆರಿಕ ಟೂರ್ನಿಯಲ್ಲಿ ಆಡುತ್ತಿರುವ, ಬ್ರೆಝಿಲ್ ವಿರುದ್ಧ ಮೊದಲ ಬಾರಿ ಸ್ಪರ್ಧಾತ್ಮಕ ಪಂದ್ಯವನ್ನು ಆಡಲು ಕಣಕ್ಕಿಳಿದ ವೆಸ್ಟ್‌ಇಂಡೀಸ್‌ನ ಹೈಟಿ ತಂಡ ಯಾವ ಹಂತದಲ್ಲೂ ಹೋರಾಟ ನೀಡಲಿಲ್ಲ.

ಕುಟಿನ್ಹೊ 14ನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. 19ನೆ ನಿಮಿಷದಲ್ಲಿ ಬಳಿಕ ಮತ್ತೊಂದು ಗೋಲು ಬಾರಿಸಿದರು. ಹೆಚ್ಚುವರಿ ಸಮಯದಲ್ಲಿ(90+2) 3ನೆ ಗೋಲು ಬಾರಿಸಿ ಹ್ಯಾಟ್ರಿಕ್ ಪೂರೈಸಿದರು. ರೆನಾಟೊ ಅಗಸ್ಟೊ(35, 86ನೆ ನಿಮಿಷ) ಅವಳಿ ಗೋಲು ಬಾರಿಸಿದರೆ, ಗ್ಯಾಬ್ರಿಯಲ್(59ನೆ ನಿಮಿಷ) ಹಾಗೂ ಲೂಕಾಸ್ ಲಿಮಾ(67ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು.

ಫುಟ್ಬಾಲ್ ಶಿಶು ಹೈಟಿ ತಂಡದ ಪರ ಜೇಮ್ಸ್ ಮರ್ಸಿಲಿನ್ ಏಕೈಕ ಗೋಲು ಬಾರಿಸಿದರು.

ಈಕ್ವೆಡಾರ್-ಪೆರು ಪಂದ್ಯ ಡ್ರಾ

ಕೋಪಾ ಅಮೆರಿಕ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಸಮಬಲದ ಹೋರಾಟ ನೀಡಿದ ಈಕ್ವೆಡಾರ್ ಹಾಗೂ ಪೆರು ತಂಡ ಪಂದ್ಯವನ್ನು 2-2 ಗೋಲುಗಳ ಅಂತರದಿಂದ ಡ್ರಾಗೊಳಿಸಿದವು.

ಪಂದ್ಯ ಆರಂಭವಾಗಿ ಮೊದಲ 14 ನಿಮಿಷಗಳಲ್ಲಿ ತಲಾ ಒಂದು ಗೋಲು ಬಾರಿಸಿದ ಪೆರು ತಂಡದ ಕ್ರಿಸ್ಟಿಯನ್ ಕ್ಯೂವಾ(5ನೆ ನಿಮಿಷ) ಹಾಗೂ ಎಡಿಸನ್ ಫ್ಲಾರೆಸ್(13ನೆ ನಿಮಿಷ) ಈಕ್ವೆಡಾರ್ ತಂಡವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸಿದರು.

ಆದರೆ,ಈಕ್ವೆಡಾರ್ ತಂಡ ಮರಳಿ ಹೋರಾಟ ನೀಡಲು ಸಫಲವಾಯಿತು. ಈಕ್ವೆಡಾರ್‌ನ ಪರ ಎನ್ನರ್ ವೆಲೆನ್ಸಿಯಾ(39ನೆ ನಿಮಿಷ) ಹಾಗೂ ಮಿಲ್ಲರ್ ಬೊಲಾನಾಸ್(48ನೆ ನಿಮಿಷ) ತಲಾ ಒಂದು ಗೋಲು ಬಾರಿಸಿ ಪಂದ್ಯವನ್ನು 2-2 ಗೋಲುಗಳ ಅಂತರದಿಂದ ಡ್ರಾ ಗೊಳಿಸಿದರು.

ಪೆರು ತಂಡ ‘ಬಿ’ ಗುಂಪಿನಲ್ಲಿ ಒಟ್ಟು ನಾಲ್ಕು ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ 2ನೆ ಸ್ಥಾನದಲ್ಲಿದೆ. ರವಿವಾರ ನಡೆಯಲಿರುವ ಮೂರನೆ ಲೀಗ್ ಪಂದ್ಯದಲ್ಲಿ ಬಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಬ್ರೆಝಿಲ್ ತಂಡವನ್ನು ಎದುರಿಸಲಿದೆ. ಈಕ್ವೆಡಾರ್ 2 ಪಂದ್ಯಗಳಲ್ಲಿ 2 ಅಂಕ ಗಳಿಸಲಷ್ಟೇ ಶಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News