×
Ad

2006ರ ವಿಶ್ವಕಪ್ ಫೈನಲ್ ಘಟನೆ ಬಗ್ಗೆ ಬೇಸರವಿದೆ: ಝೈದಾನ್

Update: 2016-06-10 20:26 IST

ಮುಂಬೈ, ಜೂ.10: ಹತ್ತು ವರ್ಷಗಳ ಹಿಂದೆ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ತಾನು ಇಟಲಿಯ ಡಿಫೆಂಡರ್ ಮಾರ್ಕೊ ಮಟೆರಝಿ ಎದೆಗೆ ತಲೆಯಿಂದ ಗುದ್ದಿದ ಕಹಿ ಘಟನೆಯನ್ನು ನೆನಪಿಸಿಕೊಂಡ ಫ್ರಾನ್ಸ್‌ನ ಫುಟ್ಬಾಲ್ ದಂತಕತೆ ಝೈನುದ್ದೀನ್ ಝೈದಾನ್, ಈ ಘಟನೆಯ ಬಗ್ಗೆ ನನಗೆ ತುಂಬಾ ಖೇದವಿದೆ ಎಂದು ಹೇಳಿದ್ದಾರೆ.

‘‘2006ರಲ್ಲಿ ಏನು ನಡೆದಿದೆಯೋ ಆ ಬಗ್ಗೆ ನನಗೆ ಹೆಮ್ಮೆಯಿಲ್ಲ. ನಾನು ಯಾವ ಆಟಗಾರನಿಗೂ ಆ ರೀತಿ ವರ್ತಿಸಿ ಎಂದು ಸಲಹೆ ನೀಡಲಾರೆ’’ ಎಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಪತ್ನಿ ವೆರೊನಿಕಾರೊಂದಿಗೆ ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿರುವ ಝೈದಾನ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು.

 ರಿಯಲ್ ಮ್ಯಾಡ್ರಿಡ್ ಕೋಚ್ ಆಗಿರುವ ತಾವು ಆಟಗಾರರಿಗೆ ಏನು ಸಲಹೆ ನೀಡುತ್ತೀರಿ ಎಂದು ಕೇಳಿದಾಗ, ‘‘ಎದುರಾಳಿ ಆಟಗಾರರು ನಮ್ಮನ್ನು ಕೆಣಕುವುದು ಸಹಜ. ಆಗ ನಾವು ನಮ್ಮ ಮೇಲೆ ಕಡಿವಾಣ ಹಾಕಿಕೊಳ್ಳಬೇಕು. ಜೀವನದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ, ತಪ್ಪಿನಿಂದ ಪಾಠ ಕಲಿತುಕೊಳ್ಳಬೇಕೆಂದು ಸಲಹೆ ನೀಡುವೆ ಎಂದರು.

ರಿಯಲ್ ಮ್ಯಾಡ್ರಿಡ್ ಕೋಚ್ ಆದ ಬಳಿಕ ಆಟಗಾರರನ್ನು ಉತ್ತೇಜಿಸಲು ಯಾವ ಮಂತ್ರ ಬಳಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಝೈದಾನ್,‘‘ ನಾನು ಆಟಗಾರನಾಗಿ ಪಡೆದಿದ್ದ ಅನುಭವವನ್ನು ಬಳಸಿಕೊಂಡೆ. ಕಠಿಣ ಶ್ರಮಹಾಕಬೇಕು. ತಂಡದ ಇತರ ಆಟಗಾರರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರಬೇಕು ಎಂದು ಕಿವಿಮಾತು ಹೇಳಿದ್ದೇನೆ ಎಂದರು.

1998ರ ವಿಶ್ವಕಪ್ ಫೈನಲ್‌ನಲ್ಲಿ ಬ್ರೆಝಿಲ್ ವಿರುದ್ಧ ಅವಳಿ ಗೋಲು ಬಾರಿಸಿದ್ದ ಝೈದಾನ್ ಫ್ರಾನ್ಸ್ ವಿಶ್ವ ಚಾಂಪಿಯನ್ ಆಗಲು ನೆರವಾಗಿದ್ದರು. ಮೂರು ಬಾರಿ ಫಿಫಾ ವರ್ಷದ ಆಟಗಾರ ಪ್ರಶಸ್ತಿ ಪಡೆದಿರುವ ಝೈದಾನ್ ವಿವಾದಿತ 2006ರ ವಿಶ್ವಕಪ್ ಬಳಿಕ ನಿವೃತ್ತಿಯಾಗಿದ್ದರು.

ಝೈದಾನ್ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಫ್ರೆಂಚ್ ಶೈಲಿಯಲ್ಲಿ ತಲೆ ಎತ್ತಲಿರುವ ಕನಾಕಿಯಾ ಪ್ಯಾಲೇಸ್‌ಗೆ ರಾಯಭಾರಿ ಆಗಿ ಭಾರತಕ್ಕೆ ಆಗಮಿಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News