ಚಾಂಪಿಯನ್ಸ್ ಹಾಕಿ ಟ್ರೋಫಿ: ಭಾರತ-ಜರ್ಮನಿ ಪಂದ್ಯ ಡ್ರಾ
ಲಂಡನ್, ಜೂ.10: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಹಾಗೂ ಹಾಲಿ ಚಾಂಪಿಯನ್ ಜರ್ಮನಿ ನಡುವಿನ ಮೊದಲ ಪಂದ್ಯ 3-3 ಅಂತರದಿಂದ ಡ್ರಾಗೊಂಡಿದೆ. ಭಾರತ ಕೊನೆಯ ಮೂರು ನಿಮಿಷದಲ್ಲಿ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡ ಕಾರಣ ಜರ್ಮನಿ ಪಂದ್ಯವನ್ನು ಡ್ರಾಗೊಳಿಸಿತು.
7ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಕನ್ನಡಿಗ ವಿ.ಆರ್. ರಘುನಾಥ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 26ನೆ ನಿಮಿಷದಲ್ಲಿ ಗೋಲು ಬಾರಿಸಿದ ಜರ್ಮನಿ ಸಮಬಲ ಸಾಧಿಸಿತು. 150ನೆ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ಮಿಡ್‌ಫೀಲ್ಡರ್ ಮನ್‌ದೀಪ್ ಸಿಂಗ್ ಭಾರತದ ಮುನ್ನಡೆಯನ್ನು 2-1 ಗೇರಿಸಿದರು.
32ನೆ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಜರ್ಮನಿಯ ಮುನ್ನಡೆಯನ್ನು 3-1ಕ್ಕೆ ಹೆಚ್ಚಿಸಿದರು. 36ನೆ ನಿಮಿಷದಲ್ಲಿ ಜರ್ಮನಿ ಮತ್ತೊಂದು ಗೋಲನ್ನು ಬಾರಿಸಿದಾಗ ಸ್ಕೋರ್ 3-2ಕ್ಕೆ ತಲುಪಿತು. ಅಂತಿಮ ಕ್ಷಣದಲ್ಲಿ ಗೋಲು ಬಾರಿಸಿದ ಜರ್ಮನಿಯ ಜೊನಸ್ ಸ್ಕೋರನ್ನು 3-3 ಅಂತರದಿಂದ ಸಮಬಲಗೊಳಿಸಿದರು.
ಭಾರತ ಶನಿವಾರ ನಡೆಯಲಿರುವ ತನ್ನ ಎರಡನೆ ಪಂದ್ಯದಲ್ಲಿ ಬ್ರಿಟನ್ ತಂಡವನ್ನು ಎದುರಿಸಲಿದೆ.