ರಿಯೋ ಒಲಿಂಪಿಕ್ಸ್‌ಗೆ ಬಿಂದ್ರಾ ಧ್ವಜಧಾರಿ
ಹೊಸದಿಲ್ಲಿ, ಜೂ.10: ಒಲಿಂಪಿಕ್ ಚಾಂಪಿಯನ್ ಅಭಿನವ್ ಬಿಂದ್ರಾ ಆಗಸ್ಟ್ 5 ರಂದು ನಡೆಯಲಿರುವ ರಿಯೋ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಭಾರತೀಯ ಅಥ್ಲೀಟ್‌ಗಳ ತಂಡವನ್ನು ಮುನ್ನಡೆಸಲಿದ್ದಾರೆ.
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಒಲಿಂಪಿಕ್ಸ್‌ನಲ್ಲಿ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಶೂಟರ್ ಬಿಂದ್ರಾರನ್ನು ಈ ವರ್ಷದ ಒಲಿಂಪಿಕ್ಸ್‌ನ ಧ್ವಜಧಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್(ಐಒಎ) ಶುಕ್ರವಾರ ದೃಢಪಡಿಸಿದೆ.
ಬಿಂದ್ರಾ ಈ ವರ್ಷ ಐದನೆ ಬಾರಿ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2012ರ ಲಂಡನ್ ಒಲಿಂಪಿಕ್ ಗೇಮ್ಸ್‌ಗೆ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್, ಟೆನಿಸ್ ಲೆಜೆಂಡ್ ಲಿಯಾಂಡರ್ ಪೇಸ್ ಹಾಗೂ ಕುಸ್ತಿಪಟು ಸುಶೀಲ್ ಕುಮಾರ್ ಜೊತೆ ಬಿಂದ್ರಾ ಹೆಸರನ್ನು ಧ್ವಜಧಾರಿ ಗೌರವಕ್ಕೆ ಶಿಫಾರಸು ಮಾಡಲಾಗಿತ್ತು.
33ರ ಹರೆಯದ ಬಿಂದ್ರಾ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಏಕೈಕ ಅಥ್ಲೀಟ್ ಆಗಿದ್ದಾರೆ. 2008ರ ಒಲಿಂಪಿಕ್‌ನಲ್ಲಿ 10 ಮೀ. ಏರ್‌ರೈಫಲ್ ಸ್ಪರ್ಧೆಯಲ್ಲಿ ಬಿಂದ್ರಾ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದರು.
ಬಿಂದ್ರಾ ಈ ವರ್ಷ ರಿಯೋ ಗೇಮ್ಸ್‌ಗೆ ಭಾರತದಿಂದ ಆಯ್ಕೆಯಾಗಿರುವ ಸದ್ಬಾವನಾ ರಾಯಭಾರಿಯಾಗಿದ್ದಾರೆ.
ಒಲಿಂಪಿಕ್ಸ್ ಬಳಿಕ ನಿವೃತ್ತಿ: ಬಿಂದ್ರಾ
‘‘ಓರ್ವ ಅಥ್ಲೀಟ್ ಆಗಿ ಒಲಿಂಪಿಕ್ ಗೇಮ್ಸ್‌ಗೆ ಧ್ವಜಧಾರಿಯಾಗಿ ಆಯ್ಕೆಯಾಗಿರುವುದು ಮಹಾ ಗೌರವ. ಒಲಿಂಪಿಕ್ ಸ್ಟೇಡಿಯಂನಲ್ಲಿ ನಾವು ಪಥಸಂಚಲನ ಮಾಡುವಾಗ ಬಿಲಿಯನ್ ಜನರು ನಮಗೆ ಬೆಂಬಲ ನೀಡುವ ವಿಶ್ವಾಸವಿದೆ. ನನ್ನ 20 ವರ್ಷಗಳ ವೃತ್ತಿಜೀವನ ಆಗಸ್ಟ್ 8 ರಂದು ಕೊನೆಗೊಳ್ಳಲಿದೆ’’ ಎಂದು ಭಾರತದ ಬಿಂದ್ರಾ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ.