ಕೋಪಾ ಅಮೆರಿಕ: ಮೆಕ್ಸಿಕೊ, ವೆನೆಝುವೆಲಾ ಕ್ವಾರ್ಟರ್ ಫೈನಲ್‌ಗೆ
ಪಸಡೆನ(ಅಮೆರಿಕ), ಜೂ.10: ಮೆಕ್ಸಿಕೊ ಹಾಗೂ ವೆನೆಝುವೆಲಾ ತಂಡ ಇಲ್ಲಿ ನಡೆಯುತ್ತಿರುವ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿವೆ.
ಇಲ್ಲಿ ಗುರುವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೊ ತಂಡ ಜಮೈಕಾ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿದರೆ, ಮತ್ತೊಂದು ಪಂದ್ಯದಲ್ಲಿ ವೆನೆಝುವೆಲಾ ತಂಡ ಉರುಗ್ವೆ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿ ಅಂತಿಮ 8ರ ಘಟ್ಟವನ್ನು ಪ್ರವೇಶಿಸಿತು.
ಮೆಕ್ಸಿಕೊ ತಂಡದ ಪರ ಚಿಚಾರಿಟೊ ಹೆಡರ್‌ನ ಮೂಲಕ 18ನೆ ನಿಮಿಷದಲ್ಲಿ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. 81ನೆ ನಿಮಿಷದಲ್ಲಿ ಗೋಲು ಬಾರಿಸಿದ ಒರಿಬೆ ಪೆರಾಲ್ಟ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು. ಮೆಕ್ಸಿಕೊ ಸತತ ಕೋಪಾ ಅಮೆರಿಕ ಟೂರ್ನಿಯಲ್ಲಿ 2 ಪಂದ್ಯ ಸಹಿತ ಸತತ 11ನೆ ಪಂದ್ಯವನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದೆ.
ಉರುಗ್ವೆ ವಿರುದ್ಧದ ಪಂದ್ಯದಲ್ಲಿ 36ನೆ ನಿಮಿಷದಲ್ಲಿ ಗೋಲು ಬಾರಿಸಿದ ಸಾಲೊಮನ್ ರಾಂಡಂನ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಕೋಪಾ ಅಮೆರಿಕ ಟೂರ್ನಿಯಲ್ಲಿ ವೆನೆಝುವೆಲಾ ತಂಡ ಉರುಗ್ವೆ ವಿರುದ್ಧ ಮೊದಲ ಗೆಲುವು ಸಾಧಿಸಿತು.
ಕೂಟದಲ್ಲಿ ಮೊದಲೆರಡು ಪಂದ್ಯಗಳನ್ನು ಜಯಿಸಿರುವ ವೆನೆಝುವೆಲಾ ತಂಡ ಸಿ ಗುಂಪಿನಲ್ಲಿ ಒಟ್ಟು 6 ಅಂಕವನ್ನು ಗಳಿಸಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಎರಡನೆ ಸೋಲು ಕಂಡಿರುವ ಉರುಗ್ವೆ ತಂಡ ಟೂರ್ನಿಯಿಂದ ಹೊರ ನಡೆದಿದೆ.
ಉರುಗ್ವೆ ತಂಡದ ಎಡಿನ್ಸನ್ ಕವಾನಿ ಹಲವು ಬಾರಿ ಅವಕಾಶವನ್ನು ಕಳೆದುಕೊಂಡರು. ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳಲು ವಿಫಲವಾಗಿದ್ದ ಲೂಯಿಸ್ ಸುಯರೆಝ್ ಸತತ ಎರಡನೆ ಪಂದ್ಯದಲ್ಲೂ ಉರುಗ್ವೆ ತಂಡದ ಪರ ಆಡಲಿಲ್ಲ.
ನಾವು ಸಂಘಟಿತ ಪ್ರದರ್ಶನ ನೀಡಲು ವಿಫಲವಾದೆವು. ಸುಯರೆಝ್ ಇನ್ನೂ ಆಡಲು ಸಜ್ಜಾಗಿಲ್ಲ. ಜಮೈಕಾ ವಿರುದ್ಧ ನಡೆಯಲಿರುವ ಅಂತಿಮ ಗ್ರೂಪ್ ಪಂದ್ಯದಲ್ಲೂ ಸುಯರೆಝ್ ಆಡುವ ಸಾಧ್ಯತೆಯಿಲ್ಲ ಎಂದು ಉರುಗ್ವೆ ತಂಡದ ಕೋಚ್ ಆಸ್ಕರ್ ಟಬರೆಝ್ ಹೇಳಿದ್ದಾರೆ.