×
Ad

ಯುರೋ 2016: ಫ್ರಾನ್ಸ್ ಗೆಲುವಿನ ಆರಂಭ

Update: 2016-06-11 23:48 IST

ಪಯೆಟ್ ಪಂದ್ಯಶ್ರೇಷ್ಠ

ಪ್ಯಾರಿಸ್, ಜೂ.11: ಕೊನೆಯ ಕ್ಷಣದಲ್ಲಿ ಡಿಮಿಟ್ರಿ ಪಯೆಟ್ ಬಾರಿಸಿದ ಆಕರ್ಷಕ ಗೋಲು ನೆರವಿನಿಂದ ರೊಮಾನಿಯಾ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಆತಿಥೇಯ ಫ್ರಾನ್ಸ್ ತಂಡ ಯುರೋ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಅಭಿಯಾನವನ್ನು ತನ್ನದೇ ಶೈಲಿಯಲ್ಲಿ ಆರಂಭಿಸಿದೆ.

ಶುಕ್ರವಾರ ಇಲ್ಲಿ ನಡೆದ ಯುರೋ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ ಫ್ರಾನ್ಸ್ ತಂಡದ ಪರವಾಗಿ ಒಲಿವರ್ ಗಿರೋಡ್(58ನೆ ನಿಮಿಷ) ಹಾಗೂ ಡಿಮಿಟ್ರಿ ಪಯೆಟ್(89ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ರೊಮಾನಿಯ ತಂಡದ ಪರ ಬಾಗ್ದಾನ್ ಸ್ಟ್ಯಾಂಕು ಪೆನಾಲ್ಟಿ ಕಾರ್ನರ್‌ನ ಮೂಲಕ 65ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

 ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಪಯೆಟ್ ಪಂದ್ಯದುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದರು. ಗಿರೊಡ್‌ಗೆ ತಂಡದ ಪರ ಮೊದಲ ಗೋಲು ಬಾರಿಸಲು ನೆರವಾಗಿದ್ದ ಪಯೆಟ್ ಪಂದ್ಯ 1-1 ರಿಂದ ಡ್ರಾದತ್ತ ಮುಖ ಮಾಡಿದ್ದಾಗ 89ನೆ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ 2-1 ಗೋಲುಗಳ ಅಂತರದಿಂದ ರೋಚಕ ಗೆಲುವು ತಂದುಕೊಟ್ಟರು.

ಕೇವಲ 7 ತಿಂಗಳ ಹಿಂದೆ, ಪ್ಯಾರಿಸ್‌ನಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ 130 ಜನರ ಬಲಿ ಪಡೆದಿದ್ದ ಸ್ಟೇಡಿಯಂನಲ್ಲೇ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟ ಪಯೆಟ್ ಕಣ್ಣೀರಿಡುತ್ತಾ ಮೈದಾನವನ್ನು ತೊರೆದರು. ಪಯೆಟ್‌ಗೆ ನೆರೆದಿದ್ದ ಪ್ರೇಕ್ಷಕರು ಎದ್ದುನಿಂತು ಗೌರವ ನೀಡಿದರು.

ಫ್ರಾನ್ಸ್ ಪರ ಗೆಲುವಿನ ಗೋಲು ಬಾರಿಸಲು ಬಹಳಷ್ಟು ಭಾವೋದ್ವೇಗ ಹಾಗೂ ಒತ್ತಡ ಎದುರಾಗಿತ್ತು. ಋತುವಿನ ಆರಂಭದಲ್ಲಿ ನಾನು ಫ್ರಾನ್ಸ್ ತಂಡದಲ್ಲಿ ಇರುತ್ತೇನೆಂದು ಯಾರೂ ಊಹಿಸಿರಲಿಲ್ಲ. ಕಠಿಣ ಶ್ರಮದ ಫಲವಾಗಿ ನಾನು ಈಗ ಇಲ್ಲಿದ್ದೇನೆ ಎಂದು ಆಕ್ರಮಣಕಾರಿ ಮಿಡ್ ಫೀಲ್ಡರ್ ಪಯೆಟ್ ಪ್ರತಿಕ್ರಿಯಿಸಿದ್ದಾರೆ.

ಫ್ರಾನ್ಸ್ ತಂಡ ತವರು ನೆಲದಲ್ಲಿ 1984ರಲ್ಲಿ ನಡೆದ ಯುರೋ ಚಾಂಪಿಯನ್‌ಶಿಪ್ ಹಾಗೂ 1998ರ ವಿಶ್ವಕಪ್‌ನ್ನು ಜಯಿಸಿದ್ದು, ಈ ಬಾರಿ ಯುರೋ ಕಪ್ ಜಯಿಸುವ ಫೇವರಿಟ್ ತಂಡವಾಗಿದೆ.

ಅಂಕಿ-ಅಂಶ

* ರೊಮಾನಿಯ ಯುರೋಪಿಯನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಈ ತನಕ ಆರಂಭಿಕ ಪಂದ್ಯವನ್ನು ಜಯಿಸಿಲ್ಲ. 3 ಪಂದ್ಯವನ್ನು ಡ್ರಾಗೊಳಿಸಿದರೆ, 2ರಲ್ಲಿ ಸೋತಿದೆ.

* ರೊಮಾನಿಯ ಯುರೋ 2016ರ ಅರ್ಹತಾ ಸುತ್ತಿನ ಅಭಿಯಾನದಲ್ಲಿ ಕೇವಲ 2 ಗೋಲು ಬಿಟ್ಟುಕೊಟ್ಟಿತ್ತು. ಇದೀಗ ಟೂರ್ನಿಯ ಮೊದಲ ಪಂದ್ಯದಲ್ಲೂ ಎರಡು ಗೋಲು ಬಿಟ್ಟುಕೊಟ್ಟಿದೆ.

*ಒಲಿವಿಯೆರ್ ಗಿರೋಡ್ ಫ್ರಾನ್ಸ್ ಆಡಿದ ಕಳೆದ 6 ಆರಂಭಿಕ ಪಂದ್ಯಗಳ ಪೈಕಿ 8 ಗೋಲುಗಳನ್ನು ಬಾರಿಸಿದ್ದಾರೆ. * ಕಿಂಗ್‌ಸ್ಲೇ ಕಾಮನ್(19 ವರ್ಷ, 362 ದಿನ) ಪ್ರಮುಖ ಟೂರ್ನಮೆಂಟ್‌ನಲ್ಲಿ ಆಡಿದ ಫ್ರಾನ್ಸ್‌ನ ಅತ್ಯಂತ ಕಿರಿಯ ಆಟಗಾರ.

ಸ್ವಿಸ್‌ಗೆ ಸುಲಭ ಜಯ

ಲೆನ್ಸ್, ಜೂ.11: ಡಿಫೆಂಡರ್ ಫ್ಯಾಬಿಯಾನ್ ಸ್ಚೆಯರ್ ಆರಂಭದಲ್ಲೇ ಬಾರಿಸಿದ ಗೋಲ್‌ನ ಸಹಾಯದಿಂದ ಸ್ವಿಟ್ಝರ್‌ಲೆಂಡ್ ತಂಡ ಯುರೋ ಕಪ್‌ನಲ್ಲಿ ಮೊದಲ ಬಾರಿ ಆಡುತ್ತಿರುವ ಅಲ್ಬೆನಿಯಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿತು.

ಟೂರ್ನಿಯಲ್ಲಿ ಇದೇ ಮೊದಲ ಬಾರಿ ನಾಕೌಟ್ ಹಂತಕ್ಕೇರಲು ಯತ್ನಿಸುತ್ತಿರುವ ಸ್ವಿಸ್ ತಂಡದ ಪರ ಫ್ಯಾಬಿಯಾನ್ 5ನೆ ನಿಮಿಷದಲ್ಲಿ ಮುನ್ನಡೆ ಒದಗಿಸಿಕೊಟ್ಟರು. ಅಲ್ಬೆನಿಯಾ ತಂಡದ ನಾಯಕ ಲಾರಿಕ್ ಕಾನಾ 2ನೆ ಬಾರಿ ಹಳದಿ ಕಾರ್ಡ್ ಪಡೆದು ಪಂದ್ಯಕ್ಕೆ ಅನರ್ಹರಾಗಿದ್ದು, ಸ್ವಿಸ್‌ನ ಗೆಲುವನ್ನು ಸುಲಭವಾಗಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News