ಪೇಸ್‌ಗೆ ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ

Update: 2016-06-11 18:21 GMT

ಬೋಪಣ್ಣ ಬೇಡಿಕೆ ತಿರಸ್ಕರಿಸಿದ ಎಐಟಿಎ

ಹೊಸದಿಲ್ಲಿ, ಜೂ.11: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ರೋಹನ್ ಬೋಪಣ್ಣ ಅವರ ಜೋಡಿಯಾಗಿ ಪೇಸ್‌ರನ್ನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗಿಳಿಸಲು ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ) ಶನಿವಾರ ನಿರ್ಧರಿಸಿದೆ. ಒಲಿಂಪಿಕ್ಸ್‌ನಲ್ಲಿ ನೇರ ಪ್ರವೇಶ ಪಡೆದಿದ್ದ ಬೋಪಣ್ಣಗೆ ತನ್ನ ಡಬಲ್ ಜೊತೆಗಾರನನ್ನು ಆಯ್ಕೆ ಮಾಡುವ ಹಕ್ಕು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಸಾಕೇತ್ ಮೈನೇನಿ ಅವರೊಂದಿಗೆ ಡಬಲ್ಸ್ ಪಂದ್ಯ ಆಡುವುದಾಗಿ ಘೋಷಿಸಿದ್ದರು.

ಆಗಸ್ಟ್ 5 ರಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ಗೆ ಟೆನಿಸ್ ತಂಡವನ್ನು ಶನಿವಾರ ಪ್ರಕಟಿಸಿರುವ ಎಐಟಿಎ ಅಧ್ಯಕ್ಷ ಅನಿಲ್ ಖನ್ನಾ,‘‘ ಬೋಪಣ್ಣ ಅವರು ಪುರುಷರ ಡಬಲ್ಸ್‌ನಲ್ಲಿ ಪೇಸ್‌ರೊಂದಿಗೆ ಆಡಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಝಾರೊಂದಿಗೆ ಬೋಪಣ್ಣ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಅವರು ಪ್ರಾರ್ಥನಾ ಥಾಂಬರೆ ಜೊತೆ ಆಡಲಿದ್ದಾರೆ ಎಂದು ತಿಳಿಸಿದ್ದಾರೆ.

 ಮೈನೇನಿ ಅವರೊಂದಿಗೆ ಒಲಿಂಪಿಕ್ಸ್‌ನಲ್ಲಿ ಡಬಲ್ಸ್ ಪಂದ್ಯ ಆಡುವೆ ಎಂದು ಬೋಪಣ್ಣ ಸಲ್ಲಿಸಿದ್ದ ಬೇಡಿಕೆಯನ್ನು ನಿರೀಕ್ಷೆಯಂತೆಯೇ ತಿರಸ್ಕರಿಸಿದ ಎಐಟಿಎ, ‘‘ಮೊನ್ನೆಯಷ್ಟೇ ಪೇಸ್ ಫ್ರೆಂಚ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಬೋಪಣ್ಣ ಅವರು ಪೇಸ್‌ರೊಂದಿಗೆ ಒಲಿಂಪಿಕ್ಸ್‌ನಲ್ಲಿ ಆಡಿದರೆ ಪದಕ ಗೆಲ್ಲುವ ಉತ್ತಮ ಅವಕಾಶವಿದೆ. ಸಾಕೇತ್ ಏಕೆ ತನ್ನ ಉತ್ತಮ ಡಬಲ್ಸ್ ಜೊತೆಗಾರ ಎಂದು ಬೋಪಣ್ಣ ಶನಿವಾರ ಆಯ್ಕೆ ಸಮಿತಿಗೆ ಕಾರಣ ನೀಡಿದ್ದಾರೆ. ತಾನು ದೇಶವನ್ನು ಪ್ರತಿನಿಧಿಸಲು ಇಷ್ಟಪಡುವೆನೆಂದೂ ಸ್ಪಷ್ಟಪಡಿಸಿದ್ದಾರೆ. ಅವರು ನಮಗೆ ನಿನ್ನೆ ದಿನ ಬರೆದಿರುವ ಪತ್ರದಲ್ಲಿ ಅರ್ಥವಿದೆ. ಪೇಸ್ ಹಾಗೂ ಬೋಪಣ್ಣ ಡೇವಿಸ್ ಕಪ್‌ನಲ್ಲಿ ನಾಲ್ಕು ಬಾರಿ ಒಟ್ಟಿಗೆ ಆಡಿದ್ದಾರೆ. 2-2 ದಾಖಲೆ ಹೊಂದಿದ್ದಾರೆ ಎಂದು ಅನಿಲ್ ಖನ್ನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News