ಸೈನಾ ಫೈನಲ್‌ಗೆ ಲಗ್ಗೆ, ಶ್ರೀಕಾಂತ್‌ಗೆ ಸೋಲು

Update: 2016-06-11 18:23 GMT

ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿ

ಸಿಡ್ನಿ, ಜೂ.11: ಸೈನಾ ನೆಹ್ವಾಲ್‌ಗೆ ಈವರ್ಷ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇನ್ನು ಒಂದೇ ಮೆಟ್ಟಿಲು ಏರಬೇಕಾಗಿದೆ. ಸೈನಾ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಸೂಪರ್ ಸರಣಿಯಲ್ಲಿ ಚೀನಾದ ಯೀಹಾನ್ ವಾಂಗ್‌ರನ್ನು ಮಣಿಸಿ ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಸೈನಾ ಅವರು 2011ರ ವಿಶ್ವ ಚಾಂಪಿಯನ್ ಯೀಹಾನ್‌ರನ್ನು 21-8, 21-12 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ರಿಯೋ ಗೇಮ್ಸ್ ಆರಂಭಕ್ಕೆ ಮೊದಲು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.

2012ರ ಲಂಡನ್ ಒಲಿಂಪಿಕ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಸೈನಾ ರವಿವಾರ ಇಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.12ನೆ ಆಟಗಾರ್ತಿ, ಚೀನಾದ ಸನ್ ಯೂ ಅವರನ್ನು ಎದುರಿಸಲಿದ್ದಾರೆ. ಸನ್ ಯೂ ಮತ್ತೊಂದು ಸೆಮಿ ಫೈನಲ್‌ನಲ್ಲಿ ತಮ್ಮದೇ ದೇಶದ ಮೂರನೆ ಶ್ರೇಯಾಂಕದ ಆಟಗಾರ್ತಿ ಲೂ ಕ್ಸುರುಯಿ ಅವರನ್ನು ಮಣಿಸಿದ್ದರು.

 2014ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಜಯಿಸಿರುವ ಸೈನಾ ಫೈನಲ್ ಪಂದ್ಯದ ಎದುರಾಳಿ ಸನ್ ವಿರುದ್ದ 5-1 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ. 2013ರ ಚೀನಾ ಓಪನ್‌ನಲ್ಲಿ ಸನ್, ಸೈನಾರನ್ನು ಸೋಲಿಸಿದ್ದರು.

ಸೈನ ಮೊದಲ ಗೇಮ್‌ನ ಆರಂಭದಲ್ಲೇ ಯೀಹಾನ್ ವಿರುದ್ಧ 15-6 ಅಂತರದಿಂದ ಮುನ್ನಡೆ ಸಾಧಿಸಿದರು. 21-8 ಅಂತರದಿಂದ ಗೇಮ್ ವಶಪಡಿಸಿಕೊಂಡರು. ಎರಡನೆ ಗೇಮ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ ಸೈನಾ ಆರಂಭದಲ್ಲೇ 11-4 ಮುನ್ನಡೆ ಸಾಧಿಸಿ ಅಂತಿಮವಾಗಿ 21-12 ಅಂತರದಿಂದ ಜಯ ಸಾಧಿಸಿದರು.

 ಶ್ರೀಕಾಂತ್ ಸವಾಲು ಅಂತ್ಯ: ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕೆ. ಶ್ರೀಕಾಂತ್ ಸವಾಲು ಅಂತ್ಯವಾಗಿದೆ. ಶ್ರೀಕಾಂತ್ ಶನಿವಾರ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಹ್ಯಾನ್ಸ್-ಕ್ರಿಸ್ಟಿಯನ್ ವಿಟ್ಟಿಂಗಸ್ ವಿರುದ್ಧ 43 ನಿಮಿಷಗಳ ಹೋರಾಟದಲ್ಲಿ 20-22, 13-21 ಗೇಮ್‌ಗಳ ಅಂತರದಿಂದ ಶರಣಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News