ಸೈನಾ ಆಸ್ಟ್ರೇಲಿಯನ್‌ ಚಾಂಪಿಯನ್‌

Update: 2016-06-12 18:18 GMT

 ಸಿಡ್ನಿ, ಜೂ.12: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್‌ನ ಮಹಿಳೆಯರ ವಿಭಾಗ ಸಿಂಗಲ್ಸ್‌ನ ಫೈನಲ್‌ನಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಇಂದು ನಡೆದ ಫೈನಲ್‌ನಲ್ಲಿ ಸೈನಾ ಅವರು ಚೀನಾದ ಸುನ್ ಯೂ ವಿರುದ್ಧ 11-21, 21-14, 21-19 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿದರು.
26ರ ಹರೆಯದ ಹೈದರಾಬಾದ್‌ನ ತಾರೆ ಸೈನಾ ಈ ಪ್ರಶಸ್ತಿಯೊಂದಿಗೆ ಒಲಿಂಪಿಕ್ಸ್‌ಗೆ ತೆರಳುವ ಮೊದಲು ಆತ್ಮವಿಶ್ವಾಸವನು ಹೆಚ್ಚಿಸಿಕೊಂಡಿದ್ದಾರೆ.
ವಿಶ್ವದ ನಂ.12 ಆಟಗಾರ್ತಿ ಸುನ್ ಯೂ ವಿರುದ್ಧ ಒಂದು ಗಂಟೆ ಮತ್ತು 12 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಸೈನಾ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಬಳಿಕ ಚೇತರಿಸಿಕೊಂಡು ಮೇಲುಗೈ ಸಾಧಿಸಿದರು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿರುವ ಸೈನಾ ಅವರು ಎರಡನೆ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಸೈನಾ ಅವರು ಸುನ್ ವಿರುದ್ಧ ಈವರೆಗೆ ಐದು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. 22ರ ಹರೆಯದ ಚೀನಾದ ಯುವತಿ ಸುನ್ ಅವರು ಸೈನಾಗೆ ಕಠಿಣ ಸವಾಲು ಒಡ್ಡಿದ್ದರು. ಸಿಡ್ನಿ ಒಲಿಂಪಿಕ್ಸ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಸೈನಾ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರು. ಸುನ್ ಅವರು ಕೇವಲ 18 ನಿಮಿಷಗಳಲ್ಲಿ ಸೈನಾ ವಿರುದ್ಧ ಮೇಲುಗೈ ಸಾಧಿಸಿದರು. ಎರಡು ಮತ್ತು ಮೂರನೆ ಗೇಮ್‌ಗಳಲ್ಲಿ  ಸೈನಾ ಮೇಲುಗೈ ಸಾಧಿಸಿ ಪ್ರಶಸ್ತಿಯನ್ನು ಸುನ್ ಕೈಯಿಂದ ಕಿತ್ತುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News