ವಾರ್ನರ್ ಶತಕ; ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ಜಯ

Update: 2016-06-12 18:23 GMT

ಸೈಂಟ್ ಕಿಟ್ಸ್, ಜೂ.12: ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ದಾಖಲಿಸಿದ ಶತಕದ ನೆರವಿನಿಂದ ಆಸ್ಟ್ರೇಲಿಯ ತಂಡ ಇಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧ ತ್ರಿಕೋನ ಸರಣಿಯ ಪಂದ್ಯದಲ್ಲಿ 36 ರನ್‌ಗಳ ರೋಚಕ ಜಯ ದಾಖಲಿಸಿದೆ.
ವಾರ್ನರ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 289 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ 47.4 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟಾಗಿದೆ.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡೆ ಕಾಕ್ (19), ಹಾಶಿಮ್ ಅಮ್ಲ(60), ಎಫ್ ಡು ಪ್ಲೆಸಿಸ್(63), ನಾಯಕ ಎಬಿಡಿವಿಲಿಯರ್ಸ್‌(39) ಮತ್ತು ಜೆ.ಪಿ.ಡುಮಿನಿ(41) ಎರಡಂಕೆಯ ಕೊಡುಗೆ ನೀಡಿದರು. ಮಿಚೆಲ್ ಸ್ಟಾರ್ಕ್(43ಕ್ಕೆ 3), ಹೆಝಲ್‌ವುಡ್ (52ಕ್ಕೆ 3) ಮತ್ತು ಝಾಂಪ(52ಕ್ಕೆ 3) ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕ ತಂಡದ ದಾಂಡಿಗರು ಗೆಲುವಿನ ಹಾದಿಯಲ್ಲಿ ಮುಗ್ಗರಿಸಿದರು.

 38 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 210 ರನ್ ಗಳಿಸಿದ್ದ ಆಫ್ರಿಕ ತಂಡ ಬಳಿಕ 42 ರನ್ ಸೇರಿಸುವಷ್ಟರಲ್ಲಿ ತನ್ನ ಎಲ್ಲಾ ವಿಕೆಟ್‌ಗಳನ್ನು ಕೈ ಚೆಲ್ಲಿತು. ಆಸ್ಟ್ರೇಲಿಯ 288/6: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 288 ರನ್ ಗಳಿಸಿತ್ತು. ವಾರ್ನರ್ ಗಳಿಸಿದ ಶತಕ, ಉಸ್ಮಾನ್ ಖ್ವಾಜಾ ಮತ್ತು ನಾಯಕ ಸ್ಟೀವ್ ಸ್ಮಿತ್ ದಾಖಲಿಸಿದ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯದ ಸ್ಕೋರ್ 280ರ ಗಡಿ ದಾಟಿತು.
ತಂಡದ ಸ್ಕೋರ್ 10 ಓವರ್‌ಗಳಲ್ಲಿ 48ಕ್ಕೆ ತಲುಪುವಾಗ ಆರಂಭಿಕ ದಾಂಡಿಗ ಆ್ಯರೊನ್ ಫಿಂಚ್ ಅವರು ಇಮ್ರಾನ್ ತಾಹಿರ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಫಿಂಚ್ 13 ರನ್ ಗಳಿಸಿದ್ದರು. ಆ ಬಳಿಕ ವಾರ್ನರ್‌ಗೆ ಉಸ್ಮಾನ್ ಖ್ವಾಜಾ ಜೊತೆಯಾದರು. ಎರಡನೆ ವಿಕೆಟ್‌ಗೆ ಇವರ ಜೊತೆಯಾಟದಲ್ಲಿ 136 ರನ್‌ಗಳು ಸೇರ್ಪಡೆಗೊಂಡಿತು.
ವಾರ್ನರ್ 157 ನಿಮಿಷಗಳ ಬ್ಯಾಟಿಂಗ್‌ನಲ್ಲಿ 120 ಎಸೆತಗಳನ್ನು ಎದುರಿಸಿದರು. 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ವಾರ್ನರ್ 109 ರನ್ ಗಳಿಸಿ ಪಾರ್ನೆಲ್‌ಗೆ ವಿಕೆಟ್ ಒಪ್ಪಿಸಿದರು.
74ನೆ ಏಕದಿನ ಪಂದ್ಯದಲ್ಲಿ ವಾರ್ನರ್ 109 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 6ನೆ ಏಕದಿನ ಶತಕ ಪೂರ್ಣಗೊಳಿಸಿದರು. ತಂಡದ ಖಾತೆಗೆ ಗರಿಷ್ಠ ರನ್‌ಗಳ ಕೊಡುಗೆ ನೀಡಿದ ವಾರ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಾರ್ನರ್ ನಿರ್ಗಮನದ ಬಳಿಕ ನಾಯಕ ಸ್ಮಿತ್ ಜೊತೆಯಾದರು. ಖ್ವಾಜಾ 59 ರನ್ ಗಳಿಸಿದರು. ಸ್ಮಿತ್ ಔಟಾಗದೆ 52 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಆಸ್ಟ್ರೇಲಿಯ 50 ಓವರ್‌ಗಳಲ್ಲಿ 288/6( ವಾರ್ನರ್ 109, ಖ್ವಾಜಾ 59, ಸ್ಮಿತ್ ಔಟಾಗದೆ 52; ತಾಹಿರ್ 2-45).
ದಕ್ಷಿಣ ಆಫ್ರಿಕ 47.4 ಓವರ್‌ಗಳಲ್ಲಿ ಆಲೌಟ್ 252( ಅಮ್ಲ 60, ಪ್ಲೆಸಿಸ್ 63, ಡುಮಿನಿ 41, ಡಿವಿಲಿಯರ್ಸ್‌ 39; ಸ್ಟಾರ್ಕ್ 3-43, ಹೆಝಲ್‌ವುಡ್ 3-52, ಝಾಂಪ 3-52)
ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News