ಕ್ಯಾನ್ಸರ್‌ಪೀಡಿತರ ಸಹಾಯಾರ್ಥಕ್ಕೆ ಪೇಸ್, ಧೋನಿ ಪರೋಕ್ಷ ನೆರವು
ಕೋಲ್ಕತಾ, ಜೂ.13: ಸ್ಪೋರ್ಟ್ಸ್ ವೆಬ್‌ಸೈಟ್ ಎಕ್ಸ್‌ಟ್ರಾ ಟೈಮ್ ಡಾಟ್‌ಕಾಮ್ ಕ್ಯಾನರ್ಸ್ ಪೀಡಿತರ ಸಹಾಯಾರ್ಥ ಆಯೋಜಿಸಿದ್ದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ಅವರ ರಾಕೆಟ್ ಹಾಗೂ ಎಂಎಸ್ ಧೋನಿ ಅವರು ಕಿಟ್ಸ್‌ಗಳು ಉತ್ತಮ ಬೆಲೆಗೆ ಹರಾಜಾದವು.
ವಿಂಬಲ್ಡನ್ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಾಗ ಪೇಸ್ ಬಳಸಿದ್ದ ರಾಕೆಟ್ ಹಾಗೂ ಸೀಮಿತ ಓವರ್ ಪಂದ್ಯಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಸಿದ್ದ ಗ್ಲೌಸ್ ಹಾಗೂ ಪ್ಯಾಡ್‌ಗಳು ಕ್ರಮವಾಗಿ 1.5 ಲಕ್ಷ ಹಾಗೂ 1 ಲಕ್ಷ ರೂ.ಗಳಿಗೆ ಹರಾಜಾದವು.
ಪೇಸ್‌ರ ರಾಕೆಟ್‌ನ್ನು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಬಂಗಾಳ ರಣಜಿ ತಂಡದ ನಾಯಕ ಮನೋಜ್ ತಿವಾರಿ ಖರೀದಿಸಿದರು. ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತೆರಳುತ್ತಿರುವ ಪೇಸ್ ಎಲ್ಲ ಕ್ರೀಡಾಳುಗಳಿಗೆ ಸ್ಫೂರ್ತಿ ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೋಹನ್ ಬಗಾನ್ ತಂಡದ ಕಟ್ಟಾ ಅಭಿಮಾನಿ ಬಪ್ಪಿ ಮಜ್‌ಹಿ ಹಾಗೂ ಈಸ್ಟ್ ಬಂಗಾಳದ ಬೆಂಬಲಿಗ ಅಲಿಪ್ ಚಕ್ರವರ್ತಿ ಅವರ ಕುಟುಂಬದ ಸಹಾಯಾರ್ಥ ಹರಾಜು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರ ಜೆರ್ಸಿ ಹಾಗೂ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಜೆರ್ಸಿ ಕೂಡ ಹರಾಜಿನಲ್ಲಿ ಮಾರಲ್ಪಟ್ಟವು.