×
Ad

ಸ್ಟಟ್‌ಗರ್ಟ್ ಓಪನ್: ಡೊಮಿನಿಕ್ ಚಾಂಪಿಯನ್

Update: 2016-06-13 23:52 IST

ಸ್ಟಟ್‌ಗರ್ಟ್(ಜರ್ಮನಿ), ಜೂ.13: ಆಸ್ಟ್ರೀಯದ ಡೊಮಿನಿಕ್ ಥೀಮ್ ಸೋಮವಾರ ಇಲ್ಲಿ ನಡೆದ ಎಟಿಪಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

 ಜರ್ಮನಿಯ ಫಿಲಿಪ್ ಕೊಹ್ಸ್ಸ್‌ಸ್ಕ್ರೈಬರ್ ವಿರುದ್ಧ 6-7(2/7), 6-4, 6-4 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ ಡೊಮಿನಿಕ್ ಚಾಂಪಿಯನ್ ಎನಿಸಿಕೊಂಡರು. ರವಿವಾರದ ಪಂದ್ಯ ಮಳೆಯಿಂದಾಗಿ ನಿಂತು ಹೋದಾಗ ಫಿಲಿಪ್ ಮೊದಲ ಸೆಟ್‌ನ ಟ್ರೈ-ಬ್ರೇಕರ್‌ನಲ್ಲಿ 3-2 ಮುನ್ನಡೆಯಲ್ಲಿದ್ದರು.

ಆದರೆ, ಸೋಮವಾರ ಮುಂದುವರಿದ ಪಂದ್ಯದಲ್ಲಿ ವಿಶ್ವದ ನಂ.7ನೆ ಆಟಗಾರ ಡೊಮಿನಿಕ್ ಸಂಪೂರ್ಣ ಮೇಲುಗೈ ಸಾಧಿಸಿದರು. ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಥಿಯೆಮ್ ಕಳೆದ ವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದರು. ಡೊಮಿನಿಕ್ ಈ ವರ್ಷ ನಾಲ್ಕನೆ ಪ್ರಶಸ್ತಿಯನ್ನು ಜಯಿಸಿದರು. ಅವರು ಈಗಾಗಲೇ ಬ್ಯುನಸ್ ಐರಿಸ್, ಅಕಪುಲ್ಕೊ ಹಾಗೂ ನೈಸ್ ಓಪನ್‌ನಲ್ಲಿ ಜಯ ಸಾಧಿಸಿದ್ದಾರೆ.

ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ರೋಜರ್ ಫೆಡರರ್‌ರನ್ನು ಮಣಿಸಿ ಶಾಕ್ ನೀಡಿದ್ದ 22ರ ಹರೆಯದ ಡೊಮಿನಿಕ್ ಈ ಋತುವಿನಲ್ಲಿ ಮೂರು ವಿವಿಧ ಅಂಗಳಗಳಲ್ಲಿ(ಆವೆಮಣ್ಣು, ಹಾರ್ಡ್ ಹಾಗೂ ಗ್ರಾಸ್‌ಕೋರ್ಟ್) ಪ್ರಶಸ್ತಿ ಜಯಿಸಿದ ಮೊದಲ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News