×
Ad

ಯುರೋಪಿಯನ್ ಚಾಂಪಿಯನ್‌ಶಿಪ್: ಬೆಲ್ಜಿಯಂ ವಿರುದ್ಧ ಇಟಲಿಗೆ ಜಯ

Update: 2016-06-14 23:57 IST

ಲಿಯೊನ್, ಜೂ.14: ಇಮ್ಯಾನುಯೆಲ್ ಗಿಯಾಕೆರಿನಿ ಹಾಗೂ ಗ್ರಾಝಿಯಾನೊ ಪೆಲ್ಲ್ಲೆ ಬಾರಿಸಿದ ತಲಾ ಒಂದು ಗೋಲು ಸಹಾಯದಿಂದ ಇಟಲಿ ತಂಡ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಲ್ಜಿಯಂ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ.

ಸೋಮವಾರ ಇಲ್ಲಿ ನಡೆದ ‘ಇ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಅಗ್ರ ರ್ಯಾಂಕಿನ ಬೆಲ್ಜಿಯಂನ ವಿರುದ್ಧ ಗಿಯಾಚೆರಿನಿ ಮೊದಲಾರ್ಧದಲ್ಲಿ(35ನೆ ನಿಮಿಷ) ಗೋಲು ಖಾತೆ ತೆರೆದರು. ಹೆಚ್ಚುವರಿ ಸಮಯದಲ್ಲಿ(90+3) ಗೋಲು ಬಾರಿಸಿದ ಪೆಲ್ಲೆ ಇಟಲಿಗೆ 2-0 ಗೋಲುಗಳ ಅಂತರದಿಂದ ಗೆಲುವು ತಂದುಕೊಟ್ಟರು.

ಬೆಲ್ಜಿಯಂಗೆ ಕಳೆದ 34 ವರ್ಷಗಳಿಂದ ಇಟಲಿಯನ್ನು ಸೋಲಿಸಲು ಸಾಧ್ಯವಾಗಿಲ್ಲ. ಈ ಗೆಲುವಿನ ಮೂಲಕ ಇಟಲಿ 3 ಅಂಕವನ್ನು ಗಳಿಸಿ ಇ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿದೆ. ಬೆಲ್ಜಿಯಂ ಶನಿವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಐರ್ಲೆಂಡ್‌ನ್ನು ಎದುರಿಸಲಿದೆ. ಐರ್ಲೆಂಡ್‌ನ್ನು ಮಣಿಸಿದರೆ ಟೂರ್ನಿಯಿಂದ ಬೇಗನೆ ಹೊರಬೀಳುವುದರಿಂದ ಬಚಾವಾಗಬಹುದು.

ಇಟಲಿ-ಬೆಲ್ಜಿಯಂ ಪಂದ್ಯದ ಮುಖ್ಯಾಂಶಗಳು

*ಬೆಲ್ಜಿಯಂ ತಂಡ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ ಕಳೆದ 8 ಪಂದ್ಯಗಳ ಪೈಕಿ ಆರರಲ್ಲಿ ಸೋತಿದೆ. ಕೇವಲ ಎರಡರಲ್ಲಿ ಗೆಲುವು ಸಾಧಿಸಿದೆ.

*ಬಫನ್ ಯುರೋದಲ್ಲಿ ಇಟಲಿಯನ್ನು ಪ್ರತಿನಿಧಿಸುತ್ತಿರುವ ಅತ್ಯಂತ ಹಿರಿಯ ಆಟಗಾರ(38 ವರ್ಷ, 136 ದಿನಗಳು). ಬಫನ್ ಯುರೋ ಚಾಂಪಿಯನ್‌ಶಿಪ್‌ನಲ್ಲಿ ಇಟಲಿ ಪರ 14ನೆ ಪಂದ್ಯ ಆಡಿದ್ದು, ಇದೊಂದು ದಾಖಲೆಯಾಗಿದೆ.

* ಇಟಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಸ್ವೀಡನ್ ತಂಡವನ್ನು ಎದುರಿಸಲಿದೆ.

*ಇಟಲಿ 1968ರಲ್ಲಿ ಕೊನೆಯ ಬಾರಿ ಯುರೋ ಕಪ್‌ನ್ನು ಜಯಿಸಿತ್ತು. ಆ ಬಳಿಕ ಎರಡು ಬಾರಿ ರನ್ನರ್ ಅಪ್ ಆಗಿತ್ತು. 2012ರಲ್ಲಿ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ 4-0 ಗೋಲುಗಳ ಅಂತರದಿಂದ ಸೋತು ಪ್ರಶಸ್ತಿ ವಂಚಿತವಾಗಿತ್ತು.

* ಇಟಲಿ ತಂಡ ಅರ್ಹತಾ ಸುತ್ತಿನಲ್ಲಿ 10 ಪಂದ್ಯಗಳಲ್ಲಿ ಏಳರಲ್ಲಿ ಜಯ ಸಾಧಿಸಿ ಅಜೇಯವಾಗಿ ಯುರೋ ಕಪ್‌ನ್ನು ಪ್ರವೇಶಿಸಿತ್ತು.

ಸ್ವೀಡನ್-ಐರ್ಲೆಂಡ್ ಪಂದ್ಯ ಡ್ರಾ

ಪ್ಯಾರಿಸ್, ಜೂ.14: ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ವೀಡನ್ ಹಾಗೂ ಐರ್ಲೆಂಡ್‌ನ ನಡುವಿನ ಈ ಗುಂಪಿನ ಪಂದ್ಯ 1-1 ರಿಂದ ಡ್ರಾಗೊಂಡಿತು.

ಸೋಮವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ 47ನೆ ನಿಮಿಷದಲ್ಲಿ ಮುನ್ನಡೆ ಸಾಧಿಸಿತು. ವೆಸ್ ವೂಲಹನ್ಸ್ ಐರಿಶ್ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟಿದ್ದರು.

71ನೆ ನಿಮಿಷದಲ್ಲಿ ನಾಯಕ ಝ್ಲಟನ್ ಇಬ್ರಾಹಿಮೊವಿಕ್ ನೆರವಿನಿಂದ ಡಿಫೆಂಡರ್ ಕ್ಲಾರ್ಕ್ ಬಾರಿಸಿದ ಗೋಲಿನ ನೆರವಿನಿಂದ ಸ್ವೀಡನ್ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News