×
Ad

ನ್ಯಾಯಾಲಯದಲ್ಲಿ ಕೃತಕ ಕಾಲಿಲ್ಲದೆ ನಡೆದಾಡಿದ ಪಿಸ್ಟೋರಿಯಸ್

Update: 2016-06-15 20:49 IST

 ಪ್ರಿಟೋರಿಯ, ಜೂ.15: ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಸುದೀರ್ಘ ಜೈಲು ಸಜೆಯ ಭೀತಿಯಲ್ಲಿರುವ ದಕ್ಷಿಣ ಆಫ್ರಿಕದ ಪ್ಯಾರಾಥ್ಲೀಟ್ ಆಸ್ಕರ್ ಪಿಸ್ಟೋರಿಯಸ್ ಶಿಕ್ಷೆಯ ವಿಚಾರಣೆ ನಡೆಸುತ್ತಿರುವ ಪ್ರಿಟೋರಿಯ ನ್ಯಾಯಾಲಯಕ್ಕೆ ಬುಧವಾರ ಕೃತಕಕಾಲಿನ ಬೆಂಬಲವಿಲ್ಲದೆ ನ್ಯಾಯಾಧೀಶರ ಮುಂದೆ ಹಾಜರಾದರು. ಈ ಮೂಲಕ ಶಿಕ್ಷೆಯಿಂದ ಪಾರಾಗುವ ಯತ್ನ ನಡೆಸಿದರು.

2013ರಲ್ಲಿ ಪ್ರೇಮಿಗಳ ದಿನದಂದೇ ಪ್ರೇಯಸಿ ರೀವಾ ಸ್ಟೀನ್ ಕ್ಯಾಂಪ್‌ರನ್ನು ಕೊಲೆಗೈದ ಪ್ರಕರಣದಲ್ಲಿ 29ರ ಹರೆಯದ ಪಿಸ್ಟೋರಿಯಸ್ ಕನಿಷ್ಠ 15 ವರ್ಷಗಳ ಜೈಲು ಶಿಕ್ಷೆ ಎದುರಿಸುವ ಸಾಧ್ಯತೆಯಿದೆ. ಪಿಸ್ಟೋರಿಯಸ್‌ಗೆ ಕನಿಕರ ತೋರಲೇ ಬಾರದು ಎಂದು ರಾಜ್ಯ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಬುಧವಾರ ಮೂರನೆ ದಿನದ ವಿಚಾರಣೆಗೆ ಹಾಜರಾದ ಪಿಸ್ಟೋರಿಯಸ್, ತನ್ನ ಪ್ರಿಟೋರಿಯದ ಮನೆಯಲ್ಲಿ ಸ್ಟೀವನ್‌ಕ್ಯಾಂಪ್‌ರನ್ನು ಕಳ್ಳಿ ಎಂದು ತಪ್ಪಾಗಿ ಭಾವಿಸಿ ಲಾಕ್ ಆಗಿದ್ದ ಟಾಯ್ಲೆಟ್ ಬಾಗಿಲ ಮೂಲಕ ನಾಲ್ಕು ಸುತ್ತು ಗುಂಡು ಹಾರಿಸಿದ್ದೆ. ಇದೊಂದು ಆಕಸ್ಮಿಕ ಘಟನೆಯಾಗಿತ್ತು ಎಂದು ಹೇಳಿದರು.

ಪಿಸ್ಟೋರಿಯಸ್ ಬಾಲ್ಯದಲ್ಲಿರುವಾಗಲೇ ಎರಡೂ ಕಾಲು ಅಂಗವಿಕಲವಾಗಿತ್ತು. ಕೃತಕ ಕಾಲುಗಳನ್ನು ಬಳಸಿಕೊಂಡು ಓಡುತ್ತಿದ್ದ ಅವರು ‘ಬ್ಲೇಡ್‌ರನ್ನರ್’ ಎಂದೇ ಖ್ಯಾತಿ ಪಡೆದಿದ್ದರು. ಕಳ್ಳರು ಬಂದಾಗ ತಾನು ಯಾವ ಕಷ್ಟ ಎದುರಿಸುವೆ ಎಂದು ತೋರಿಸಲು ಪಿಸ್ಟೋರಿಯಸ್‌ಗೆ ಕೃತಕ ಕಾಲಿಲ್ಲದೆ ನ್ಯಾಯಾಲಯದಲ್ಲಿ ನಡೆದಾಡುವಂತೆ ಪಿಸ್ಟೋರಿಯಸ್ ಪರ ವಕೀಲರು ತಿಳಿಸಿದರು.

ಪಿಸ್ಟೋರಿಯಸ್‌ಗೆ ಜು.6 ರಂದು ಶಿಕ್ಷೆ ಪ್ರಕಟ

ಗೆಳತಿಯನ್ನು ಕೊಲೆಗೈದ ಆರೋಪ ಎದುರಿಸುತ್ತಿರುವ ಆಸ್ಕರ್ ಪಿಸ್ಟೋರಿಯಸ್‌ಗೆ ಜುಲೈ 6 ರಂದು ಶಿಕ್ಷೆಯ ಪ್ರಮಾಣ ಘೋಷಿಸಲಾಗುತ್ತದೆ ಎಂದು ಪ್ರಿಟೋರಿಯಾ ನ್ಯಾಯಾಲಯ ಹೇಳಿದೆ.

ದಕ್ಷಿಣ ಆಫ್ರಿಕದಲ್ಲಿ ಕೊಲೆ ಆರೋಪಿಗೆ ಕನಿಷ್ಟ 15 ವರ್ಷ ಶಿಕ್ಷೆ ನೀಡಲಾಗುತ್ತದೆ. ಕೆಲವೊಂದು ಸಂದರ್ಭವನ್ನು ಆಧರಿಸಿ ನ್ಯಾಯಾಧೀಶರು ಪಿಸ್ಟೋರಿಯಸ್ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News