ಇಂದು ಮಿಸ್ಬಾವುಲ್ ಹಕ್ ನಿವೃತ್ತಿ ಘೋಷಣೆ ಸಾಧ್ಯತೆ
ಕರಾಚಿ, ಜೂ.16: ಪಾಕಿಸ್ತಾನ ತಂಡ ಶುಕ್ರವಾರ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳುವ ಮೊದಲು ತಂಡದ ಯಶಸ್ವಿ ಟೆಸ್ಟ್ ನಾಯಕ ಮಿಸ್ಬಾವುಲ್ ಹಕ್ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
42ರ ಹರೆಯದ ಮಿಸ್ಬಾ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೋರಿಕೆಯ ಮೇರೆಗೆ ತನ್ನ ನಿವೃತ್ತಿ ನಿರ್ಧಾರವನ್ನು ಒಂದು ವರ್ಷ ಮುಂದೂಡಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳುವಂತೆ ಪಿಸಿಬಿ ಮಿಸ್ಬಾವುಲ್ ಹಕ್‌ರಲ್ಲಿ ವಿನಂತಿಸಿತ್ತು. ಮಿಸ್ಬಾ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಿದ್ದಾರೆ ಅಥವಾ ಕ್ರಿಕೆಟ್ ಮಂಡಳಿಗೆ ತನ್ನ ನಿರ್ಧಾರ ತಿಳಿಸುವ ಸಾಧ್ಯತೆಯಿದೆ.
ಮಿಸ್ಬಾವುಲ್ ಹಕ್ ಕಳೆದ ವರ್ಷ ವಿಶ್ವಕಪ್‌ನ ಬಳಿಕ ಏಕದಿನ ಅಂತಾರಾಷ್ಟ್ರೀಯ ಪಂದ್ಯದಿಂದ ನಿವೃತ್ತಿಯಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯಲು ನಿರ್ಧರಿಸಿದ್ದರು.
ಪಾಕ್ ತಂಡ 2010ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಅವರು ತಂಡದಲ್ಲಿರಲಿಲ್ಲ. ಆ ಪ್ರವಾಸದಲ್ಲಿ ಪಾಕ್ ತಂಡ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಿಲುಕಿತ್ತು.
ಮಿಸ್ಬಾವುಲ್ ಹಕ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಎರಡು ಬಾರಿ ಟೆಸ್ಟ್ ಸರಣಿ ಜಯಿಸಿತ್ತು. 2012 ಹಾಗೂ 2015ರಲ್ಲಿ ಯುಎಇಯಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಪಾಕ್ ತಂಡ 3-0 ಅಂತರದಿಂದ ಸರಣಿ ಜಯಿಸಿತ್ತು.