×
Ad

ರಶ್ಯ ಬೆಂಬಲಿಗರಿಗೆ ಫ್ರಾನ್ಸ್‌ನಿಂದ ಗೇಟ್‌ಪಾಸ್

Update: 2016-06-16 23:51 IST

 ಪ್ಯಾರಿಸ್, ಜೂ.16: ಇಂಗ್ಲೆಂಡ್ ತಂಡ ತಮ್ಮದೇ ದೇಶದ ಎದುರಾಳಿ ವೇಲ್ಸ್ ತಂಡವನ್ನು ಯುರೋ ಕಪ್‌ನ ಮುಂದಿನ ಪಂದ್ಯದಲ್ಲಿ ಎದುರಿಸಲಿದೆ. ಈ ಪಂದ್ಯದಲ್ಲಿ ಹಿಂಸಾಚಾರ ನಡೆಯದಿರಲಿ ಎಂಬ ಉದ್ದೇಶದಿಂದ ಫ್ರಾನ್ಸ್‌ನಲ್ಲಿರುವ ರಶ್ಯದ ಸುಮಾರು 20 ಮಂದಿ ಬೆಂಬಲಿಗರನ್ನು ಹೊರ ಹಾಕಲಾಗಿದೆ.

  ಮಾರ್ಸೆಲ್ಲಿಯಲ್ಲಿ ಇತ್ತೀಚೆಗೆ ಇಂಗ್ಲೆಂಡ್-ರಶ್ಯ ಬೆಂಬಲಿಗರ ನಡುವೆ ಹಿಂಸಾಚಾರ ಘಟನೆ ನಡೆದಿರುವ ಕಾರಣ ರಶ್ಯದ ಫುಟ್ಬಾಲ್ ಬೆಂಬಲಿಗ ಸಂಘಟನೆಯ ಮುಖ್ಯಸ್ಥ ಅಲೆಕ್ಸಾಂಡರ್ ಶಿಪ್ರಿಗಿನ್ ಸಹಿತ 20 ಬೆಂಬಲಿಗರನ್ನು ಫ್ರಾನ್ಸ್‌ನಿಂದ ಹೊರಹಾಕಲಾಗಿದೆ. ಭದ್ರತಾ ಕಾರಣದಿಂದ ಫ್ರೆಂಚ್ ಅಧಿಕಾರಿಗಳು ಈ ಕ್ರಮವನ್ನು ಕೈಗೊಂಡಿದ್ದಾರೆ. ಫ್ರಾನ್ಸ್‌ನಿಂದ ಹೊರ ಹಾಕಲ್ಪಟ್ಟವರಲ್ಲಿ ಬೆಂಬಲಿಗರ ಮುಖ್ಯಸ್ಥನೂ ಇದ್ದಾನೆೆ. ಇನ್ನು ಐದು ದಿನಗಳಲ್ಲಿ ಎಲ್ಲ ಬೆಂಬಲಿಗರನ್ನು ಫ್ರಾನ್ಸ್‌ನಿಂದ ಹೊರಗಟ್ಟಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

  ಬ್ರಿಟನ್-ವೇಲ್ಸ್ ನಡುವೆ ಲೆನ್ಸ್ ಪಟ್ಟಣದಲ್ಲಿ ನಡೆಯಲಿರುವ ಯುರೋ ಪಂದ್ಯಕ್ಕೆ 50,000 ಬೆಂಬಲಿಗರು ಆಗಮಿಸಲಿದ್ದು, ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬುಧವಾರ ಇಂಗ್ಲೆಂಡ್‌ನ 36 ಅಭಿಮಾನಿಗಳನ್ನು ಬಂಧಿಸಲಾಗಿದ್ದು, ಈ ಪಂದ್ಯದ ವೇಳೆಯೂ ಇಂಗ್ಲೆಂಡ್ ಅಭಿಮಾನಿಗಳ ಮೇಲೆ ಕಣ್ಣಿಡಲಾಗುತ್ತದೆ.

ಲೆನ್ಸ್ ಪಟ್ಟಣದಲ್ಲಿ ಅಭಿಮಾನಿಗಳಿಂದ ಗಲಾಟೆಯಾಗುವ ಭೀತಿಯ ಹಿನ್ನೆಲೆಯಲ್ಲಿ ಶಾಲಾ-ಕಾಲೇಜಿಗಳಿಗೆ ರಜೆ ಸಾರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News