ನರಸಿಂಗ್ ಯಾದವ್‌ಗೆ ಬೆಂಬಲ ನೀಡುವೆ: ಸುಶೀಲ್ ಕುಮಾರ್
ಹೊಸದಿಲ್ಲಿ, ಜೂ.17: ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಕನಸು ಈಡೇರದಿದ್ದರೂ ಯುವ ಕುಸ್ತಿಪಟು ನರಸಿಂಗ್ ಯಾದವ್‌ಗೆ ಬೆಂಬಲ ನೀಡುವೆ ಎಂದು ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ ಹೇಳಿದ್ದಾರೆ.
ಕೊನೆಗೂ ದಿಲ್ಲಿ ಹೈಕೋರ್ಟ್‌ನ ತೀರ್ಪಿಗೆ ತಲೆಬಾಗಿರುವ ಸುಶೀಲ್ ಕುಮಾರ್ ಅವರಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ನರಸಿಂಗ್‌ಗೆ ತಮ್ಮ ಬೆಂಬಲವಿದೆಯೇ ಎಂದು ಕೇಳಿದಾಗ, ‘‘ನರಸಿಂಗ್ ಪಾಕಿಸ್ತಾನದವರಲ್ಲ. ಅವರೂ ನಮ್ಮವರೇ. ಅವರಿಗೆ ಬೆಂಬಲ ನೀಡದೇ ಇರಲು ಕಾರಣವೇ ಇಲ್ಲ. ಇದೀಗ ನಾನು ತರಬೇತಿಯಲ್ಲಿ ನಿರತನಾಗಿದ್ದು, ಅದುವೇ ನನ್ನ ಪ್ರಮುಖ ಗುರಿಯಾಗಿದೆ’’ ಎಂದು ಹೇಳಿದರು.
ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಲಾಸ್‌ವೇಗಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಯಾದವ್ 74 ಕೆಜಿ ತೂಕ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿದ್ದರು. ಮತ್ತೊಂದೆಡೆ, ಸುಶೀಲ್ ಅವರು 66 ಕೆಜಿ ತೂಕ ವಿಭಾಗದಲ್ಲಿ ಎರಡು ಬಾರಿ ಪದಕ ಜಯಿಸಿದ್ದರು. ಭುಜನೋವಿನಿಂದಾಗಿ ವಿಶ್ವ ಚಾಂಪಿಯನ್‌ಶಿಪ್‌ನಿಂದ ವಂಚಿತರಾಗಿದ್ದ ಸುಶೀಲ್ ಕುಮಾರ್ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದರು.