×
Ad

ಕೋಪಾ ಅಮೆರಿಕ ಟೂರ್ನಿ: ಅಮೆರಿಕ ಸೆಮಿಫೈನಲ್‌ಗೆ

Update: 2016-06-17 23:37 IST

ಕ್ಯಾಲಿಫೋರ್ನಿಯ, ಜೂ.17: ಹಿರಿಯ ಆಟಗಾರ ಕ್ಲಿಂಟ್ ಡೆಂಪ್ಸೆ ನೀಡಿದ ಉತ್ತಮ ಆರಂಭದ ನೆರವಿನಿಂದ ಆತಿಥೇಯ ಅಮೆರಿಕ ತಂಡ ಈಕ್ವೆಡಾರ್ ವಿರುದ್ಧ ಜಯ ಸಾಧಿಸಿ 100ನೆ ಆವೃತ್ತಿಯ ಕೋಪಾ ಅಮೆರಿಕ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದೆ.

ಗುರುವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕ ತಂಡ 2-1 ಗೋಲುಗಳ ಅಂತರದಿಂದ ಈಕ್ವೆಡಾರ್ ತಂಡವನ್ನು ಮಣಿಸಿ ತವರು ನೆಲದಲ್ಲಿ ನಡೆಯುತ್ತಿರುವ ಕೋಪಾ ಅಮೆರಿಕ ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದ ಮೊದಲ ತಂಡ ಎನಿಸಿಕೊಂಡಿತು.

22ನೆ ನಿಮಿಷದಲ್ಲಿ ಗೋಲು ಬಾರಿಸಿದ ಡೆಂಪ್ಸೆ ಅಮೆರಿಕ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 65ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಗಿಯಾಸಿ ಝಾರ್ದೆಸ್ ಅಮೆರಿಕದ ಮುನ್ನಡೆಯನ್ನು 2-0ಗೆ ಏರಿಸಿದರು. 74ನೆ ನಿಮಿಷದಲ್ಲಿ ಈಕ್ವೆಡಾರ್‌ನ ಮೈಕಲ್ ಅರ್ರೊಯೊ ಏಕೈಕ ಗೋಲು ಬಾರಿಸಿದರು.

ಕ್ಲಿಂಟ್ ಡೆಂಪ್ಸೆ ಮೂರನೆ ಪಂದ್ಯದಲ್ಲಿ ಮೂರನೆ ಗೋಲು ಬಾರಿಸಿ ಅಮೆರಿಕದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅಮೆರಿಕದ ಹಿರಿಯ ಮಿಡ್‌ಫೀಲ್ಡರ್ ಡೆಂಪ್ಸೆ ಈ ವರ್ಷದ ಕೋಪಾ ಅಮೆರಿಕದಲ್ಲಿ ಅಮೆರಿಕದ ಆಡಿದ್ದ 4 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಗೋಲು ಬಾರಿಸಿದ್ದಾರೆ.

 ಅಮೆರಿಕ ಪ್ರಮುಖ ಟೂರ್ನಮೆಂಟ್‌ನ ನಾಕೌಟ್ ಹಂತದಲ್ಲಿ ನಾಲ್ಕನೆ ಬಾರಿ ಜಯ ಸಾಧಿಸಿದೆ. ಅಮೆರಿಕ ಜಯ ಸಾಧಿಸಿದ ಈ ಹಿಂದಿನ ಮೂರು ಪಂದ್ಗಳೆಂದರೆ: 2009ರಲ್ಲಿ ಕಾನ್ಫಡರೇಶನ್ ಕಪ್‌ನ ಸೆಮಿಫೈನಲ್‌ನಲ್ಲಿ ಸ್ಪೇನ್ ವಿರುದ್ಧ, 2002ರ ವಿಶ್ವಕಪ್‌ನಲ್ಲಿ ಅಂತಿಮ 16ರ ಸುತ್ತಿನಲ್ಲಿ ಮೆಕ್ಸಿಕೊ ವಿರುದ್ಧ ಹಾಗೂ 1995ರ ಕೋಪಾ ಅಮೆರಿಕ ಟೂರ್ನಿಯಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಮೆಕ್ಸಿಕೊ ವಿರುದ್ಧ ಜಯ ಸಾಧಿಸಿತ್ತು.

ಅಮೆರಿಕ ಮಂಗಳವಾರ ನಡೆಯಲಿರುವ ಕೋಪಾ ಅಮೆರಿಕ ಟೂರ್ನಿಯ ಸೆಮಿಫೈನಲ್‌ನಲ್ಲಿ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಜಯ ಸಾಧಿಸಲಿರುವ ಅರ್ಜೆಂಟೀನ ಅಥವಾ ವೆನೆಝುವೆಲಾ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News