ಜರ್ಮನಿ-ಪೊಲೆಂಡ್ ಪಂದ್ಯ ಗೋಲುರಹಿತ ಡ್ರಾ,ಕೂಟದಿಂದ ಉಕ್ರೇನ್ ಹೊರಕ್ಕೆ
ಪ್ಯಾರಿಸ್, ಜೂ. 17: ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ನಡೆದ ಪಂದ್ಯಗಳಲ್ಲಿ ಜರ್ಮನಿ ತಂಡ ಇದೇ ಮೊದಲ ಬಾರಿ ಗೋಲುರಹಿತ ಡ್ರಾ ಸಾಧಿಸಿದರೆ, ಉಕ್ರೇನ್ ಟೂರ್ನಿಯಿಂದ ಹೊರ ನಡೆದ ಮೊದಲ ತಂಡ ಎನಿಸಿಕೊಂಡಿದೆ.
ಎರಡು ವರ್ಷಗಳ ಹಿಂದೆ ಬ್ರೆಝಿಲ್‌ನಲ್ಲಿ ವಿಶ್ವ ಚಾಂಪಿಯನ್‌ಪಟ್ಟಕ್ಕೇರಿದ್ದ ಜರ್ಮನಿ ತಂಡ ರವಿವಾರ ಉಕ್ರೇನ್ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿತ್ತು. ಪೊಲೆಂಡ್ ವಿರುದ್ಧ ಪಂದ್ಯದಲ್ಲಿ ಫೇವರಿಟ್ ತಂಡವಾಗಿ ಕಣಕ್ಕಿಳಿದಿತ್ತು. ಆದರೆ, ಸಂಘಟಿತ ಪ್ರದರ್ಶನ ನೀಡಿದ ಪೊಲೆಂಡ್ ವಿಶ್ವ ಚಾಂಪಿಯನ್ ಜರ್ಮನಿಯ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಅಚ್ಚರಿ ಮೂಡಿಸಿತು.
ಈ ಫಲಿತಾಂಶದಿಂದಾಗಿ ಉಭಯ ತಂಡಗಳು ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಬೇಕಾದರೆ ಸಿ ಗುಂಪಿನ ತಮ್ಮ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಎರಡೂ ತಂಡಗಳು ಟೂರ್ನಿಯ ಮೊದಲ ಪಂದ್ಯವನ್ನು ಜಯಿಸಿವೆ.
ಜರ್ಮನಿ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ನಾರ್ದನ್ ಐರ್ಲೆಂಡ್ ತಂಡವನ್ನು, ಪೊಲೆಂಡ್ ತಂಡ ಉಕ್ರೇನ್ ತಂಡವನ್ನು ಎದುರಿಸಲಿದೆ. 2008ರಲ್ಲಿ ಕೊನೆಯ ಬಾರಿ ಯುರೋ ಚಾಂಪಿಯನ್‌ಶಿಪ್‌ನಲ್ಲಿ ಮುಖಾಮುಖಿಯಾಗಿದ್ದ ಜರ್ಮನಿ-ಪೊಲೆಂಡ್ ಒಂದೂ ಗೋಲು ಬಾರಿಸದೇ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರಿಗೆ ಬೋರ್ ಹೊಡೆಸಿದವು.
‘‘ನಾವು ಹಲವು ಅವಕಾಶವನ್ನು ಸೃಷ್ಟಿಸಿದ್ದೆವು. ನಮ್ಮ ಆಟದಲ್ಲಿ ವೇಗವಿರಲಿಲ್ಲ. ಪೊಲೆಂಡ್‌ನ 10 ಆಟಗಾರರ ಪೈಕಿ 9 ಮಂದಿ ಚೆಂಡಿನ ಹಿಂದೆಯೇ ಇದ್ದರು’’ ಎಂದು ಜರ್ಮನಿಯ ಕೋಚ್ ಜೋಕಿಮ್ ಲಾ ಹೇಳಿದ್ದಾರೆ.
ಉಕ್ರೇನ್ ಅಭಿಯಾನ ಅಂತ್ಯ: ನಾರ್ದನ್ ಐರ್ಲೆಂಡ್ ತಂಡದ ವಿರುದ್ಧ 2-0 ಗೋಲುಗಳ ಅಂತರದಿಂದ ಸೋತಿರುವ ಉಕ್ರೇನ್ ತಂಡ ಯುರೋ ಕಪ್‌ನಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದೆ. ಉಕ್ರೇನ್ ಟೂರ್ನಿಯಿಂದ ಹೊರ ನಡೆದ ಮೊದಲ ತಂಡ ಎನಿಸಿಕೊಂಡಿದೆ.
ಐರ್ಲೆಂಡ್ ತಂಡ 34 ವರ್ಷಗಳ ಬಳಿಕ ಯುರೋ ಕಪ್‌ನಲ್ಲಿ ಜಯಭೇರಿ ಬಾರಿಸಿತು.1982ರಲ್ಲಿ ಸ್ಪೇನ್‌ನ ವಿರುದ್ಧ ಕೊನೆಯ ಬಾರಿ ಜಯ ಸಾಧಿಸಿತ್ತು. ಐರ್ಲೆಂಡ್‌ನ ಪರ ಗಾರೆತ್ ಮೆಕ್‌ಅಲೆ(49ನೆ ನಿಮಿಷ) ಮೊದಲಾರ್ಧದಲ್ಲಿ ಗೋಲು ಬಾರಿಸಿದರೆ, ಅಂತಿಮ ಅವಧಿಯಲ್ಲಿ ನಿಯಾಲ್ ಮೆಕ್‌ಗಿನ್(90+6 ನಿಮಿಷ) ಎರಡನೆ ಗೋಲು ಬಾರಿಸಿದರು.
ಪೊಲೆಂಡ್ ವಿರುದ್ಧದ ಪಂದ್ಯದಲ್ಲಿ 1-0 ಗೋಲುಗಳ ಅಂತರದಿಂದ ಸುಲಭವಾಗಿ ಸೋತಿದ್ದ ನಾರ್ದನ್ ಐರ್ಲೆಂಡ್ ತಂಡ ಉಕ್ರೇನ್ ವಿರುದ್ಧ ಪರಿಪೂರ್ಣ ಆಟವಾಗಿ ಗಮನ ಸೆಳೆಯಿತು. ಇದಕ್ಕೆ ಮೊದಲು ನಡೆದಿದ್ದ ಜರ್ಮನಿ-ಪೊಲೆಂಡ್ ಪಂದ್ಯ ಗೋಲುರಹಿತ ಡ್ರಾಗೊಂಡ ಕಾರಣ ಉಕ್ರೇನ್ ಟೂರ್ನಿಯಿಂದ ಹೊರ ನಡೆದಿದೆ.