×
Ad

ಪೆರುಗೆ ಸೋಲುಣಿಸಿದ ಕೊಲಂಬಿಯಾ ಸೆಮಿಗೆ

Update: 2016-06-18 23:59 IST

ನ್ಯೂಜೆರ್ಸಿ,ಜೂ.18: ಪೆರು ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದಿಂದ ಮಣಿಸಿದ ಕೊಲಂಬಿಯಾ ತಂಡ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದೆ.

ಶುಕ್ರವಾರ ಇಲ್ಲಿ ಅತ್ಯಂತ ನೀರಸವಾಗಿ ಸಾಗಿದ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಸಮಯದಲ್ಲಿ ಗೋಲುರಹಿತ ಡ್ರಾ ಸಾಧಿಸಿದವು. ಈಹಿನ್ನೆಲೆಯಲ್ಲಿ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಅಳವಡಿಸಲಾಯಿತು.

 ಪೆನಾಲ್ಟಿ ಶೂಟೌಟ್‌ನಲ್ಲಿ ಕೊಲಂಬಿಯಾದ ಪರ ಜೇಮ್ಸ್ ರೋಡ್ರಿಗಝ್, ಜುಯಾನ್ ಕ್ವಾಡಾರ್ಡೊ, ಮೊರೆನೊ ಹಾಗೂ ಸೆಬಾಸ್ಟಿಯನ್ ಪೆರೆಝ್ ತಲಾ ಒಂದು ಗೋಲು ಬಾರಿಸಿದರು. ಪೆರು ಪರವಾಗಿ ಡಿಯಾಝ್ ಹಾಗೂ ಟಾಪಿಯಾ ತಲಾ ಒಂದು ಗೋಲು ಬಾರಿಸಿದರು. ಪೆರು ತಂಡದ ಮಿಗುಯೆಲ್ ಟ್ರೌಕೊ ಹಾಗೂ ಕ್ರಿಸ್ಟಿಯನ್ ಕ್ಯೂವಾ ಬಾರಿಸಿದ ಇನ್ನೆರಡು ಗೋಲು ಗುರಿ ತಪ್ಪುವಂತೆ ಮಾಡುವಲ್ಲಿ ಕೊಲಂಬಿಯಾದ ಗೋಲ್‌ಕೀಪರ್ ಡೇವಿಡ್ ಒಸ್ಪಿನಾ ಯಶಸ್ವಿಯಾದರು.

ಕೊಲಂಬಿಯಾ 2004ರ ಬಳಿಕ ಯುರೋ ಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದೆ. ಪೆರು ತಂಡ ಸತತ ಮೂರನೆ ಬಾರಿ ಸೆಮಿಫೈನಲ್‌ಗೆ ತಲುಪುವ ವಿಶ್ವಾಸದಲ್ಲಿತ್ತು. ಆದರೆ ಈ ಬಾರಿ ಅದು ಸಾಧ್ಯವಾಗಲಿಲ್ಲ. ಅಂತಿಮ 4ರ ಘಟ್ಟ ತಲುಪಿರುವ ಕೊಲಂಬಿಯಾ ಬುಧವಾರ ಚಿಕಾಗೊದಲ್ಲಿ ನಡೆಯಲಿರುವ ಮುಂದಿನ ಸುತ್ತಿನ ಪಂದ್ಯದಲ್ಲಿ ಮೆಕ್ಸಿಕೋ ಅಥವಾ ಚಿಲಿ ತಂಡವನ್ನು ಎದುರಿಸಲಿದೆ.

‘‘ಇದೊಂದು ತುಂಬಾ ಒತ್ತಡದಿಂದ ಕೂಡಿದ್ದ ಪಂದ್ಯವಾಗಿತ್ತು. ನಮ್ಮ ತಂಡ ಉತ್ತಮವಾಗಿ ಆಡಿತು. ನಾವೀಗ ಪಂದ್ಯದ ಗೆಲುವನ್ನು ಆನಂದಿಸುವ ಜೊತೆಗೆ ಮುಂದಿನ ಪಂದ್ಯಕ್ಕೂ ಸಜ್ಜಾಗಬೇಕಾಗಿದೆ. ಸ್ಟೇಡಿಯಂನಲ್ಲಿ ನಮ್ಮ ದೇಶದ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರೆಲ್ಲರೂ ನಮ್ಮ ಗೆಲುವಿನಿಂದ ಸಂಭ್ರಮಪಟ್ಟಿದ್ದಾರೆ’’ ಎಂದು ಕೊಲಂಬಿಯಾದ ಗೋಲ್‌ಕೀಪರ್ ಡೇವಿಡ್ ಒಸ್ಪಿನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News