ಯುರೋ ಕಪ್: ಜರ್ಮನಿ, ಪೊಲೆಂಡ್ ಅಂತಿಮ-16ಕ್ಕೆ ಲಗ್ಗೆ
ಪ್ಯಾರಿಸ್,ಜೂ.22: ಉತ್ತರ ಐರ್ಲೆಂಡ್ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ವಿಶ್ವ ಚಾಂಪಿಯನ್ ಜರ್ಮನಿ ತಂಡ ಯುರೋ ಕಪ್‌ನ ‘ಸಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು ಅಂತಿಮ-16ರ ಸುತ್ತಿಗೆ ಪ್ರವೇಶಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಜರ್ಮನಿಯ ಪರ ಮಾರಿಯೊ ಗೊಮೆಝ್ ಮೊದಲಾರ್ಧದಲ್ಲಿ ಗೋಲುಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ಆದಾಗ್ಯೂ ಜರ್ಮನಿ ಹಲವು ಅವಕಾಶವನ್ನು ಕೈಚೆಲ್ಲಿತು. ಅಂಕಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿರುವ ಐರಿಶ್ ತಂಡಕ್ಕೆ ಈಗಲೂ ಮುಂದಿನ ಸುತ್ತಿಗೇರುವ ಅವಕಾಶವಿದೆ.
ಜಾಕಿಮ್ ಲಾ ಕೋಚಿಂಗ್‌ನಲ್ಲಿ ಪಳಗುತ್ತಿರುವ ಜರ್ಮನಿ ಸಿ ಗುಂಪಿನಲ್ಲಿ ಒಟ್ಟು 7 ಅಂಕವನ್ನು ಗಳಿಸಿ ಅಗ್ರ ಸ್ಥಾನಕ್ಕೇರಿದೆ. ರವಿವಾರ ನಡೆಯಲಿರುವ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಸಿ ಗುಂಪಿನಲ್ಲಿ ಮೂರನೆ ಸ್ಥಾನ ಪಡೆಯಲಿರುವ ತಂಡವನ್ನು ಎದುರಿಸಲಿದೆ.
ಯರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಐರೀಷ್ ಆಟಗಾರರು ಜರ್ಮನಿಯ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.
ಪೊಲೆಂಡ್ ಚೊಚ್ಚಲ ನಾಕೌಟ್ ಭಾಗ್ಯ
ಈಗಾಗಲೇ ಸ್ಪರ್ಧೆಯಿಂದ ಹೊರಗುಳಿದಿರುವ ಉಕ್ರೇನ್ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿರುವ ಪೊಲೆಂಡ್ ತಂಡ ಇದೇ ಮೊದಲ ಬಾರಿ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ನಾಕೌಟ್ ಹಂತಕ್ಕೇರಿದೆ.
ಸಿ ಗುಂಪಿನಲ್ಲಿ ಎರಡನೆ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಪೊಲೆಂಡ್ ಅಂತಿಮ-16ರ ಸುತ್ತಿನಲ್ಲಿ ಸ್ವಿಟ್ಝರ್ಲೆಂಡ್ ತಂಡವನ್ನು ಎದುರಿಸಲಿದೆ. ಪೊಲೆಂಡ್ ಉತ್ತಮ ಆರಂಭವನ್ನು ಪಡೆದರೂ ಒಂದು ಹಂತದಲ್ಲಿ ಪಂದ್ಯವನ್ನು ಡ್ರಾಗೊಳಿಸುವ ಯೋಚನೆಯಲ್ಲಿದ್ದಂತೆ ಕಂಡು ಬಂತು. ಪೊಲೆಂಡ್ ಡ್ರಾ ಸಾಧಿಸಿದರೂ ಮುಂದಿನ ಸುತ್ತಿಗೇರುವ ಅವಕಾಶವಿತ್ತು.
ದ್ವಿತೀಯಾರ್ಧದಲ್ಲಿ ಗೋಲು ಬಾರಿಸಿದ ಜಾಕಬ್ ಬ್ಲಾಸ್ಕಿಕೌವ್‌ಸ್ಕಿ ಪೊಲೆಂಡ್‌ಗೆ 1-0 ಗೋಲು ಅಂತರದ ಗೆಲುವು ತಂದುಕೊಟ್ಟರು.
ಈ ಫಲಿತಾಂಶದೊಂದಿಗೆ ಪೊಲೆಂಡ್ ತಂಡ ಏಳಂಕವನ್ನು ಪಡೆದು ಎರಡನೆ ಸ್ಥಾನದಲ್ಲಿದೆ. ಜರ್ಮನಿಯು ಏಳಂಕವನ್ನು ಪಡೆದಿದ್ದರೂ ಗೋಲು ವ್ಯತ್ಯಾಸದ ಹಿನ್ನೆಲೆಯಲ್ಲಿ ಮೊದಲ ಸ್ಥಾನದಲ್ಲಿದೆ.