ಮಂಜಾದ ದೃಷ್ಟಿ, ವಿಪರೀತ ನೋವಿನೊಂದಿಗೆ ವಿಕೆಟ್‌ಕೀಪಿಂಗ್ ನಡೆಸಿದ ಧೋನಿ!

Update: 2016-06-23 12:35 GMT

ಹರಾರೆ, ಜೂ.23: ಭಾರತದ ನಾಯಕ ಎಂಎಸ್ ಧೋನಿ ಈ ಹಿಂದೆ ಎಷ್ಟೇ ನೋವಿದ್ದರೂ ಕ್ರಿಕೆಟ್ ಆಡುವುದನ್ನು ನಿಲ್ಲಿಸಿರಲಿಲ್ಲ. ತನ್ನ ನೋವನ್ನು ಎಲ್ಲೂ ಕೂಡ ವ್ಯಕ್ತಪಡಿಸಿರಲಿಲ್ಲ. ಆದರೆ, ಝಿಂಬಾಬ್ವೆ ವಿರುದ್ಧ ಬುಧವಾರ ನಡೆದ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಧೋನಿ ವಿಭಿನ್ನ ಪರಿಸ್ಥಿತಿ ಎದುರಿಸಬೇಕಾಯಿತು.

ಕಣ್ಣು ನೋವಿನಲ್ಲೂ ಪೂರ್ತಿ 20 ಓವರ್ ವಿಕೆಟ್‌ಕೀಪಿಂಗ್ ನಡೆಸಿದ ಧೋನಿ ತಂಡಕ್ಕೆ 3 ರನ್‌ಗಳ ರೋಚಕ ಗೆಲುವು ತಂದುಕೊಡುವಲ್ಲಿ ಕಾಣಿಕೆ ನೀಡಿದ್ದಾರೆ. ಮೂರನೆ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿತ್ತು. ಧೋನಿ ಇನಿಂಗ್ಸ್‌ನ 17ನೆ ಓವರ್‌ನಲ್ಲಿ ಡೊನಾಲ್ಡೊ ಟಿರಿಪಾನೊ ಎಸೆತದಲ್ಲಿ 9 ರನ್‌ಗೆ ಕ್ಲೀನ್‌ಬೌಲ್ಡಾಗಿದ್ದರು.

ಝಿಂಬಾಬ್ವೆ ವಿರುದ್ಧ ಬೇಗನೆ ರನ್ ಗಳಿಸುವ ಧಾವಂತದಲ್ಲಿದ್ದ ಧೋನಿ ಡೊನಾಲ್ಡೊ ಎಸೆತವನ್ನು ಆಡಲು ಯತ್ನಿಸಿದಾಗ ಚೆಂಡು ಸ್ಟಂಪ್‌ಗೆ ಹೋಗಿ ಬಡಿಯಿತು. ಚೆಂಡು ಸ್ಟಂಪ್‌ಗೆ ತಾಗಿದ ರಭಸಕ್ಕೆ ಬೇಲ್ಸ್ ಮೇಲಕ್ಕೆ ಚಿಮ್ಮಿತು. ಅದರಲ್ಲಿ ಒಂದು ಬೇಲ್ ಧೋನಿಯ ಹೆಲ್ಮೆಟ್ ಗ್ರಿಲ್‌ಗೆ ಅಪ್ಪಳಿಸಿತು. ಮಾತ್ರವ ಲ್ಲ ಧೋನಿಯ ಬಲಗಣ್ಣಿಗೆ ಜೋರಾಗಿ ತಾಗಿತ್ತು.

ಬೈಲ್ ತಾಗಿ ಕಣ್ಣು ಕೆಂಪಾಗಿದ್ದ ಚಿತ್ರವನ್ನು ಸಾಮಾಜಿಕ ತಾಣಗಳಲ್ಲಿ ಹಾಕಿರುವ ಧೋನಿ, ಬೈಲ್ಸ್ ಹೊಡೆದರೆ ಹೀಗಿಯೇ ಆಗುತ್ತದೆ. ಮಂಜಾದ ದೃಷ್ಟಿ ಹಾಗೂ ನೋವಿನಲ್ಲೇ ವಿಕೆಟ್‌ಕೀಪಿಂಗ್ ನಡೆಸಿದ್ದೆ ಎಂದು ಟ್ವೀಟರ್ ಪೇಜ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News