×
Ad

ಬಾಕ್ಸರ್ ಮನೋಜ್‌ಕುಮಾರ್, ವಿಕಾಸ್ ಒಲಿಂಪಿಕ್ಸ್‌ಗೆ ಅರ್ಹತೆ

Update: 2016-06-23 19:20 IST

ಹೊಸದಿಲ್ಲಿ, ಜೂ.23: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮನೋಜ್ ಕುಮಾರ್(64 ಕೆ.ಜಿ.) ಹಾಗೂ ಏಷ್ಯನ್ ಗೇಮ್ಸ್ ಚಾಂಪಿಯನ್ ವಿಕಾಸ್ ಕೃಷ್ಣನ್(75 ಕೆಜಿ) ಮುಂಬರುವ ರಿಯೋ ಗೇಮ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಝೆರ್‌ಬೈಜಾನ್‌ನಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್‌ನ(ಎಐಬಿಎ) ವಿಶ್ವ ಕಾಲಿಫೈಯಿಂಗ್ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ ಮನೋಜ್ ಕುಮಾರ್ ಹಾಗೂ ವಿಕಾಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.

ಮನೋಜ್ 64 ಕೆ.ಜಿ. ತೂಕ ವಿಭಾಗದ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ತಜಕಿಸ್ತಾನದ ರಾಖಿಮೊವ್ ಶವ್ಕ್‌ತ್‌ಝಾನ್‌ರನ್ನು ಮಣಿಸಿದರು. ವಿಕಾಸ್ ಅವರು ಕೊರಿಯಾದ ಲೀ ಡೊಂಗ್‌ಯುನ್‌ರನ್ನು 3-0 ಅಂತರದಿಂದ ಸೋಲಿಸಿದರು. ಇದೀಗ ಭಾರತದ ಒಟ್ಟು ಮೂವರು ಬಾಕ್ಸರ್‌ಗಳು ಒಲಿಂಪಿಕ್ಸ್‌ಗೆ ತೇರ್ಗಡೆಯಾಗಿದ್ದಾರೆ.

ಶಿವ ಥಾಪ 56 ಕೆಜಿ ತೂಕ ವಿಭಾಗದಲ್ಲಿ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಮಾರ್ಚ್‌ನಲ್ಲಿ ನಡೆದಿದ್ದ ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಶಿವ ಥಾಪ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಭಾರತದ ಇನ್ನೊಬ್ಬ ಬಾಕ್ಸರ್ ಸುಮಿತ್ ಸಾಂಗ್ವಾನ್ ಪ್ರಸ್ತುತ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದು, ರಿಯೋ ಗೇಮ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News