ಕ್ರಿಕೆಟ್‌ನ ಹಿರಿಮೆ ಹೆಚ್ಚಿಸಿದ ಕನ್ನಡಿಗ ಕುಂಬ್ಳೆ
ಹೊಸದಿಲ್ಲಿ, ಜೂ.24: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದೇಶದ ಅತ್ಯಂತ ಯಶಸ್ವಿ ಬೌಲರ್ ಅನಿಲ್ ಕುಂಬ್ಳೆ ಅವರನ್ನು ಮುಂದಿನ ತಿಂಗಳು ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಳ್ಳುವ ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ನೇಮಕ ಮಾಡಿದೆ. ಟೆಸ್ಟ್‌ನಲ್ಲಿ 619 ಹಾಗೂ ಏಕದಿನ ಪಂದ್ಯದಲ್ಲಿ 337 ವಿಕೆಟ್‌ಗಳನ್ನು ಪಡೆದಿರುವ ಕುಂಬ್ಳೆ ಕ್ರಿಕೆಟ್ ಜೀವನದ ಐದು ಮಹತ್ವದ ಕ್ಷಣಗಳು ಇಲ್ಲಿವೆ ನೋಡಿ.
10ಕ್ಕೆ 10:
1999ರ ಫೆಬ್ರವರಿ 7ರಂದು ದಿಲ್ಲಿಯ ಫಿರೋಜ್‌ಷಾ ಕೋಟ್ಲಾ ಕ್ರೀಡಾಂಗಣದಲ್ಲಿ, ಇನಿಂಗ್ಸ್‌ನ ಹತ್ತೂ ವಿಕೆಟ್‌ಗಳನ್ನೂ ಕಿತ್ತು, ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಪಾಕಿಸ್ತಾನ ವಿರುದ್ಧದ 2 ಟೆಸ್ಟ್‌ಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ, ಪಾಕಿಸ್ತಾನ ಗೆಲ್ಲಲು 420 ರನ್ ಬೇಕಿತ್ತು. ಅಂತಿಮ ದಿನ ಡ್ರಾ ಮಾಡಿಕೊಳ್ಳಲು ಪಾಕ್ ಹೆಣಗುತ್ತಿತ್ತು. ಆಗ ಜೀವನಶ್ರೇಷ್ಠ ಸಾಧನೆ ತೋರಿದ ಸ್ಪಿನ್ ಮಾಂತ್ರಿಕ 74 ರನ್‌ಗಳಿಗೆ 10 ವಿಕೆಟ್ ಕಿತ್ತು, 19 ವರ್ಷದಲ್ಲಿ ಭಾರತಕ್ಕೆ ಪಾಕ್ ವಿರುದ್ಧ ಮೊದಲ ಜಯ ತಂದುಕೊಟ್ಟರು.
ಗಾಯಾಳುವಾಗಿ
ಇದು ಮೈ ಝುಮ್ಮೆನಿಸುವ ಕ್ರೀಡಾಸ್ಫೂರ್ತಿ. 2002ರ ಮೇ ತಿಂಗಳಲ್ಲಿ ವೆಸ್ಟ್‌ಇಂಡೀಸ್‌ನ ಸೆಂಟ್ ಜಾನ್ಸ್‌ನಲ್ಲಿ ನಾಲ್ಕನೇ ಟೆಸ್ಟ್‌ನ ಮೂರನೇ ದಿನದ ಆಟ. ಬ್ಯಾಟಿಂಗ್ ವೇಳೆ ಆಗಿದ್ದ ಗಾಯದ ಕಾರಣದಿಂದ ದವಡೆಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕುಂಬ್ಳೆ ಫೀಲ್ಡಿಂಗ್ ಮಾಡಿದರು. 14 ಓವರ್‌ಗಳ ಬೌಲಿಂಗ್ ಮಾಡಿದ ಕುಂಬ್ಳೆ ಬ್ರಿಯಾನ್ ಲಾರಾ ಅವರ ಅಮೂಲ್ಯ ವಿಕೆಟ್ ಪಡೆದರು.
ಕುಂಬ್ಳೆ ಸಿಕ್ಸರ್
ಕುಂಬ್ಳೆಯವರ ಮತ್ತೊಂದು ಐತಿಹಾಸಿಕ ಸಾಧನೆ 1993ರ ನವೆಂಬರ್ 27ರಂದು. ವೆಸ್ಟ್‌ಇಂಡೀಸ್ ವಿರುದ್ಧದ ಹೀರೊಕಪ್ ಫೈನಲ್‌ನಲ್ಲಿ ಈಡನ್ ಗಾರ್ಡನ್‌ನಲ್ಲಿ 12 ರನ್ನಿಗೆ 6 ವಿಕೆಟ್ ಕಿತ್ತರು. ಈ ದಾಖಲೆ 2014ರ ವರೆಗೂ ಅವರ ಹೆಸರಿನಲ್ಲಿತ್ತು. 2014ರಲ್ಲಿ ಸ್ಟುವರ್ಟ್ ಬಿನ್ನಿ 4 ರನ್ನಿಗೆ ಬಾಂಗ್ಲಾದ 6 ವಿಕೆಟ್ ಕಿತ್ತು ಈ ದಾಖಲೆ ಮುರಿದರು. ಈ ಪಂದ್ಯದಲ್ಲಿ ಅಜರುದ್ದೀನ್ ನೇತೃತ್ವದ ಭಾರತ ತಂಡ 102 ರನ್ನುಗಳ ಭರ್ಜರಿ ಜಯ ಸಾಧಿಸಿತು.
ಮೊದಲ ಹಾಗೂ ಕೊನೆ ಶತಕ
ಕುಂಬ್ಳೆ ಟೆಸ್ಟ್ ಜೀವನದ ಏಕೈಕ ಶತಕ ಬಂದದ್ದು, 2007ರಲ್ಲಿ ಓವೆಲ್‌ನಲ್ಲಿ. ಇಂಗ್ಲೆಂಡ್ ವಿರುದ್ಧ 1-0 ಮುನ್ನಡೆಯಲ್ಲಿದ್ದ ಭಾರತ ಕೊನೆಯ ಟೆಸ್ಟ್‌ನಲ್ಲಿ, ಕೊನೆಯವರಾಗಿ ಬಂದಿದ್ದ ಶ್ರೀಶಾಂತ್ ಜೊತೆ ಈ ಸಾಧನೆ ಮಾಡಿದರು. ಶ್ರೀಶಾಂತ್ ಕ್ರೀಸ್‌ಗೆ ಬಂದಾಗ ಕುಂಬ್ಳೆ 97ರಲ್ಲಿದ್ದರು. ಕೆವಿನ್ ಪೀಟರ್‌ಸನ್ ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿ ಈ ಸಾಧನೆ ಮಾಡಿದರು.
ಗೆಲುವಿನತ್ತ ಮುನ್ನಡೆಸಿದರು
2002ರಲ್ಲಿ ಇಂಗ್ಲೆಂಡಿನ ಹೆಡಿಂಗ್ಲೆಯಲ್ಲಿ, ಸರಣಿ ಸಮಬಲ ಮಾಡಿಕೊಳ್ಳಲು ಭಾರತಕ್ಕೆ ಇನಿಂಗ್ಸ್ ಗೆಲುವು ತಂದುಕೊಟ್ಟ ಕುಂಬ್ಳೆಗೆ ಸ್ಮರಣೀಯ ಪಂದ್ಯ. ಈ ಪಂದ್ಯದಲ್ಲಿ ರಾಬ್ ಕೀ, ನಾಸಿರ್ ಹುಸೇನ್, ಅಲೆಕ್ ಸ್ಟುವರ್ಟ್ ಸೇರಿದಂತೆ ನಾಲ್ವರನ್ನು ಬಲಿಪಡೆದು ಅತಿಥೇಯರಿಗೆ ಫಾಲೋ ಆನ್ ಹೇರಿದರು.