ಬಾಕ್ಸಿಂಗ್:ಕಂಚಿಗೆ ತೃಪ್ತಿಪಟ್ಟ ವಿಕಾಸ್,ಮನೋಜ್

Update: 2016-06-24 18:01 GMT

ಬಾಕು, ಜೂ.24: ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಭಾರತೀಯ ಬಾಕ್ಸರ್‌ಗಳಾದ ವಿಕಾಸ್ ಕೃಷ್ಣನ್(75ಕೆಜಿ) ಹಾಗೂ ಮನೋಜ್ ಕುಮಾರ್(64ಕೆಜಿ) ಇಂಟರ್‌ನ್ಯಾಶನಲ್ ಬಾಕ್ಸಿಂಗ್ ಸಂಸ್ಥೆ ಆಯೋಜಿಸಿರುವ ವರ್ಲ್ಡ್ ಕ್ವಾಲಿಫೈಯ್ ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿಕೊಂಡಿದ್ದಾರೆ.

  ವಿಕಾಸ್‌ಗೆ ಕ್ವಾರ್ಟರ್‌ಫೈನಲ್ ಪಂದ್ಯದ ವೇಳೆ ಹಣೆಗೆ ಗಾಯವಾಗಿ ಹೊಲಿಗೆ ಹಾಕಲಾಗಿತ್ತು. ವಿಕಾಸ್ ಸೆಮಿಫೈನಲ್‌ನಲ್ಲಿ ಆಡಲು ಅನ್‌ಫಿಟ್ ಎಂದು ವೈದ್ಯರು ಘೋಷಿಸಿದ ಹಿನ್ನೆಲೆಯಲ್ಲಿ ಅವರು ಬಾಕ್ಸಿಂಗ್ ಸ್ಪರ್ಧೆಯಿಂದ ಬಲವಂತವಾಗಿ ಹೊರಗುಳಿಯಬೇಕಾಯಿತು.

 ಮತ್ತೊಂದು ಸೆಮಿಫೈನಲ್‌ನಲ್ಲಿ ಮನೋಜ್ ಕುಮಾರ್ ಹಾಲಿ ಯುರೋಪಿಯನ್ ಚಾಂಪಿಯನ್ ಬ್ರಿಟನ್‌ನ ಪ್ಯಾಟ್ ಮೆಕ್‌ಕಾರ್ಮಕ್ ವಿರುದ್ಧ 0-3 ಅಂತರದಿಂದ ಶರಣಾದರು.

ಭಾರತದ ಇನ್ನೋರ್ವ ಬಾಕ್ಸರ್ ಸುಮಿತ್ ಸಾಂಗ್ವಾನ್(81 ಕೆಜಿ)ಒಲಿಂಪಿಕ್ಸ್ ಕನಸು ಭಗ್ನಗೊಂಡಿದೆ. ಕಳೆದ ರಾತ್ರಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಸುಮಿತ್ ರಶ್ಯದ ಅಗ್ರ ಶ್ರೇಯಾಂಕದ ಪೀಟರ್ ಖಮುಕೊವ್ ವಿರುದ್ಧ ಶರಣಾದರು.

ರಶ್ಯದ ಬಾಕ್ಸರ್ ಸೆಮಿಫೈನಲ್‌ನಿಂದ ಹಿಂದೆ ಸರಿದ ಕಾರಣ ಸಾಂಗ್ವಾನ್‌ರ ಒಲಿಂಪಿಕ್ಸ್ ಕನಸು ಈಡೇರಲಿಲ್ಲ. ಒಂದು ವೇಳೆ ರಶ್ಯದ ಬಾಕ್ಸರ್ ಫೈನಲ್‌ಗೆ ತಲುಪಿ ಚಿನ್ನ ಜಯಿಸುತ್ತಿದ್ದರೆ ಸಾಂಗ್ವಾನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿದ್ದರು.

ಮನೋಜ್, ವಿಕಾಸ್ ಹಾಗೂ ಶಿವ ಥಾಪ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೂವರು ಬಾಕ್ಸರ್‌ಗಳಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News