×
Ad

ಯುರೋ ಕಪ್: ಇಂದಿನಿಂದ ಪ್ರಿ-ಕ್ವಾರ್ಟರ್‌ಫೈನಲ್ ಆರಂಭ

Update: 2016-06-24 23:44 IST

ಪ್ಯಾರಿಸ್, ಜೂ.24: ಯುರೋ ಕಪ್-2016ರ ನಾಕೌಟ್ ಹಂತದ ಪಂದ್ಯಗಳು ಶನಿವಾರದಿಂದ ಇಲ್ಲಿ ಆರಂಭವಾಗಲಿದ್ದು, 16 ತಂಡಗಳು ಪರಸ್ಪರ ಸೆಣಸಾಡಲಿವೆ. ಯುರೋಪ್‌ನ ಕೆಳ ರ್ಯಾಂಕಿನ ತಂಡಗಳಿಗೆ ಸಾಂಪ್ರದಾಯಿಕ ದೈತ್ಯ ತಂಡಗಳನ್ನು ಮಣಿಸಿ ಸೆಮಿ ಫೈನಲ್‌ಗೆ ತಲುಪುವ ಅಪೂರ್ವ ಅವಕಾಶವಿದೆ.

 ಹಾಲಿ ಚಾಂಪಿಯನ್ ಸ್ಪೇನ್ ತಂಡ ಅಂತಿಮ-16ರ ಪಂದ್ಯದಲ್ಲಿ ಇಟಲಿಯನ್ನು ಎದುರಿಸಲಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ, ಸೆಮಿಫೈನಲ್‌ನಲ್ಲಿ ಫ್ರಾನ್ಸ್ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸುವ ಸಾಧ್ಯತೆಯಿದೆ.

ಬೆಲ್ಜಿಯಂ, ಕ್ರೊಯೇಷಿಯಾ, ಸ್ವಿಟ್ಝರ್ಲೆಂಡ್,ಪೊಲೆಂಡ್ ಹಾಗೂ ವೇಲ್ಸ್ ತಂಡಗಳಿಗೆ ಜುಲೈ 10 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಡಿ ಚೊಚ್ಚಲ ಅಂತಾರಾಷ್ಟ್ರೀಯ ಪ್ರಶಸ್ತಿ ಜಯಿಸುವ ಕನಸು ಕಾಣುತ್ತಿವೆ.

ಬೆಲ್ಜಿಯಂ ತಂಡ ಅಂತಿಮ-16ರ ಸುತ್ತಿನಲ್ಲಿ ಹಂಗೇರಿ ತಂಡದ ವಿರುದ್ಧ ಕಠಿಣ ಸವಾಲು ಎದುರಿಸಲಿದೆ. 30 ವರ್ಷಗಳ ಬಳಿಕ ಪ್ರಮುಖ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಬೆಲ್ಜಿಯಂ ಎಫ್ ಗುಂಪಿನ ಮೂಲಕ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ.

ಇಟಲಿಯ ವಿರುದ್ಧದ ಮೊದಲ ಪಂದ್ಯವನ್ನು 2-0 ಅಂತರದಿಂದ ಸೋತಿದ್ದ ಬೆಲ್ಜಿಯಂ ತಂಡ ರಿಪಬ್ಲಿಕ್ ಐರ್ಲೆಂಡ್ ವಿರುದ್ಧ ಪಂದ್ಯದಲ್ಲಿ ಮರಳಿ ಹೋರಾಟ ನೀಡಿತ್ತು. ಸ್ವೀಡನ್ ವಿರುದ್ಧ ಜಯ ಸಾಧಿಸಿ ಇ ಗುಂಪಿನಲ್ಲಿ ಎರಡನೆ ಸ್ಥಾನ ಪಡೆದು ಅಂತಿಮ-16ಕ್ಕೆ ಪ್ರವೇಶಿಸಿತ್ತು.

ಸ್ಪೇನ್ ವಿರುದ್ಧ ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿದ ಇವಾನ್ ಪೆರಿಸಿಕ್ ಕ್ರೊಯೇಷಿಯಾ ತಂಡ ಡಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಲು ಕಾರಣರಾಗಿದ್ದರು. ಬುಧವಾರ ಐಸ್‌ಲೆಂಡ್ ತಂಡ ಆಸ್ಟ್ರೀಯದ ವಿರುದ್ಧ ಜಯ ಸಾಧಿಸಿರುವ ಕಾರಣ ಕ್ರೊವೇಷಿಯ ಮುಂದಿನ ಸುತ್ತಿನಲ್ಲಿ ಐಸ್‌ಲೆಂಡ್ ಬದಲಿಗೆ ಪೋರ್ಚುಗಲ್‌ನ್ನು ಎದುರಿಸಲಿದೆ.

ಇದೇ ಮೊದಲ ಬಾರಿ ಟೂರ್ನಿಯಲ್ಲಿ ಅಂತಿಮ 16ರ ಸುತ್ತಿಗೆ ಪ್ರವೇಶಿಸಿರುವ ಪೊಲೆಂಡ್ ಹಾಗೂ ಸ್ವಿಟ್ಝರ್ಲೆಂಡ್ ಶನಿವಾರ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸೆಣಸಾಡಲಿವೆ.

1958ರ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ವೇಲ್ಸ್ ತಂಡ ಇದೀಗ 58 ವರ್ಷಗಳ ಬಳಿಕ ಟೂರ್ನಿಯಲ್ಲಿ ಎರಡನೆ ಸುತ್ತಿಗೆ ತಲುಪಿದೆ. ಗಾರೆತ್ ಬಾಲೆ ನೇತೃತ್ವದ ವೇಲ್ಸ್ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಇಂದು ವೇಲ್ಸ್-ಉತ್ತರ ಐರ್ಲೆಂಡ್, ಸ್ವಿಟ್ಝರ್ಲೆಂಡ್-ಪೊಲೆಂಡ್ , ಕ್ರೊಯೇಷಿಯ-ಪೋರ್ಚುಗಲ್ ಮುಖಾಮುಖಿ

  ಪ್ಯಾರಿಸ್, ಜೂ.24: ಯುರೋ ಕಪ್‌ನ ಅಂತಿಮ-16ರ ಸುತ್ತಿನಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ವೇಲ್ಸ್ ತಂಡ ಉತ್ತರ ಐರ್ಲೆಂಡ್ ತಂಡವನ್ನು, ಸ್ವಿಟ್ಝರ್ಲೆಂಡ್-ಪೊಲೆಂಡ್ ಹಾಗೂ ಕ್ರೊಯೇಷಿಯ ತಂಡ ಪೋರ್ಚುಗಲ್ ಂಡವನ್ನು ಎದುರಿಸಲಿದೆ.

ರಿಪಬ್ಲಿಕ್ ತಂಡ ಇ ಗುಂಪಿನಲ್ಲಿ ಇಟಲಿ ವಿರುದ್ಧ 1-0 ಅಂತರದ ಗೆಲುವು ಸಾಧಿಸಿ ಅಂತಿಮ-16ಕ್ಕೆ ತೇರ್ಗಡೆಯಾಗಿತ್ತು. ವೇಲ್ಸ್ ತಂಡ ಬಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದ್ದು, ಶನಿವಾರ ಪ್ಯಾರಿಸ್‌ನಲ್ಲಿ ಉತ್ತರ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಯುರೋ ಕಪ್ ಅಂತಿಮ-16 ವೇಳಾಪಟ್ಟಿ

  ಜೂ.25-ಶನಿವಾರ  ಸ್ವಿಟ್ಝರ್ಲೆಂಡ್-ಪೊಲೆಂಡ್ 

ಜೂ.25-ಶನಿವಾರ   ವೇಲ್ಸ್-ಉತ್ತರ ಐರ್ಲೆಂಡ್

  ಜೂ.25-ಶನಿವಾರ   ಕ್ರೊಯೇಷಿಯ-ಪೋರ್ಚುಗಲ್

   ಜೂ.26-ರವಿವಾರ  ಫ್ರಾನ್ಸ್-ರಿಪಬ್ಲಿಕ್ ಆಫ್ ಐರ್ಲೆಂಡ್

ಜೂ.26-ರವಿವಾರ    ಜರ್ಮನಿ-ಸ್ಲೋವಾಕಿಯ

ಜೂ.26-ರವಿವಾರ    ಹಂಗೇರಿ-ಬೆಲ್ಜಿಯಂ

 ಜೂ.27-ಸೋಮವಾರ   ಇಟಲಿ-ಸ್ಪೇನ್

  ಜೂ.27-ಸೋಮವಾರ  ಇಂಗ್ಲೆಂಡ್-ಐಸ್‌ಲೆಂಡ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News