×
Ad

ವಿದೇಶ ಪ್ರವಾಸಕ್ಕೆ ತಂಡವನ್ನು ಸಜ್ಜುಗೊಳಿಸುವುದು ಮೊದಲ ಆದ್ಯತೆ: ಅನಿಲ್ ಕುಂಬ್ಳೆ

Update: 2016-06-24 23:46 IST

 ಮುಂಬೈ, ಜೂ.24: ಭಾರತದ ಟೆಸ್ಟ್ ಕ್ರಿಕೆಟ್ ತಂಡ ಇತ್ತೀಚೆಗಿನ ವರ್ಷಗಳಲ್ಲಿ ವಿದೇಶಿ ನೆಲದಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ವಿಫಲವಾಗುತ್ತಿದೆ. ತಂಡ ಆತ್ಮವಿಶ್ವಾಸದಿಂದ ವಿದೇಶ ಪ್ರವಾಸ ಕೈಗೊಳ್ಳುವಂತೆ ಮಾಡುವುದು ಗುರುವಾರ ಟೀಮ್ ಇಂಡಿಯಾದ ಕೋಚ್ ಆಗಿ ಆಯ್ಕೆಯಾಗಿರುವ ಅನಿಲ್ ಕುಂಬ್ಳೆಯವರ ಮೊದಲ ಆದ್ಯತೆಯಾಗಿದೆ.

ಭಾರತ ಕಂಡ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಕುಂಬ್ಳೆ ಗುರುವಾರ ಒಂದು ವರ್ಷ ಅವಧಿಗೆ ಟೀಮ್ ಇಂಡಿಯಾದ ಪ್ರಮುಖ ಕೋಚ್ ಆಗಿ ಆಯ್ಕೆಯಾಗಿದ್ದಾರೆ. 45ರ ಹರೆಯದ ಕುಂಬ್ಳೆಗೆ ಕೋಚಿಂಗ್ ಅನುಭವದ ಕೊರತೆಯಿದ್ದರೂ ಬಿಸಿಸಿಐ ಅವರ ಮೇಲೆ ಭಾರೀ ವಿಶ್ವಾಸ ಇರಿಸಿ ದೊಡ್ಡ ಜವಾಬ್ದಾರಿ ನೀಡಿದೆ.

ಬಿಸಿಸಿಐ ಕೋಚ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದಾಗ 57 ಅರ್ಜಿಗಳು ಸಲ್ಲಿಕೆಯಾಗಿದ್ದವು. ಮಾಜಿ ನಾಯಕರುಗಳಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಕುಂಬ್ಳೆ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿತ್ತು. ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಮುಂಬೈ ಹಾಗೂ ಬೆಂಗಳೂರು ತಂಡಗಳಿಗೆ ಕುಂಬ್ಳೆ ಮೆಂಟರ್(ಸಲಹೆಗಾರ) ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿ ಅವರಿಗೆ ಕೋಚಿಂಗ್ ನೀಡಲು ಹೆಚ್ಚು ಅವಕಾಶವಿರಲಿಲ್ಲ.

‘‘ನಾನು ಮೊದಲ ಬಾರಿ ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹಾಜರಾಗಿರುವುದು ತುಂಬಾ ಭಿನ್ನ ಅನುಭವ ನೀಡಿತು. ನನ್ನ ವೃತ್ತಿಜೀವನದುದ್ದಕ್ಕೂ ನನ್ನೊಂದಿಗೆ ಆಡಿರುವ ಸಹೋದ್ಯೋಗಿಗಳು ಟೇಬಲ್‌ನ ಮತ್ತೊಂದು ಕಡೆಯಲ್ಲಿದ್ದರು. ನನಗೆ ತುಂಬಾ ಅಚ್ಚರಿಯ ಜೊತೆಗೆ ಒತ್ತಡ ಉಂಟಾಗಿತ್ತು’’ ಎಂದು ಇತ್ತೀಚೆಗೆ ಕೋಚ್ ಹುದ್ದೆಗಾಗಿ ನಡೆದ ಸಂದರ್ಶನದ ಬಗ್ಗೆ ಕುಂಬ್ಳೆ ಹೇಳಿದರು.

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವಿದೇಶದಲ್ಲಿ ಕಳಪೆ ದಾಖಲೆ ಹೊಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಂಬ್ಳೆ, ‘‘ನಮ್ಮ ತಂಡದ ವಿದೇಶದ ದಾಖಲೆಯ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು. ಇದೀಗಲೇ ಆ ನಿಟ್ಟಿಯಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ. ಭಾರತ ತಂಡ ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಳ್ಳುವ ಮೊದಲು ಬೆಂಗಳೂರಿನಲ್ಲಿ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಚಾರ. ವೆಸ್ಟ್‌ಇಂಡೀಸ್ ಸರಣಿಗೆ ತೆರಳುವ ಮೊದಲು ಕುಳಿತು ಚರ್ಚೆ ನಡೆಸಲಿದ್ದೇವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪಂದ್ಯವನ್ನು ಜಯಿಸಬೇಕಾದರೆ 20 ವಿಕೆಟ್‌ಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಮಗೆ ಗಮನವಿರಲಿದೆ’’ ಎಂದರು.

‘‘ನಾನು ಹಿನ್ನೆಲೆಯಲ್ಲಿ ನಿಂತು ಕೆಲಸ ಮಾಡುವೆ. ಆ ಮೂಲಕ ಮೈದಾನದ ಒಳಗೆ ಹಾಗೂ ಹೊರಗೆ ನಾಯಕನಿಗಿರುವ ಒತ್ತಡವನ್ನು ಕಡಿಮೆ ಮಾಡಲು ಬಯಸಿದ್ದೇನೆ. ಈ ತಂಡ ಬಲಿಷ್ಠವಾಗಿದೆ ಎಂದು ನಾನು ನಂಬಿದ್ದೇನೆ. ಇದೊಂದು ಯುವ ತಂಡ. ತಂಡವನ್ನು ಯುವ ನಾಯಕ ಮುನ್ನಡೆಸುತ್ತಿದ್ದಾನೆ. ವಿರಾಟ್ ಕೊಹ್ಲಿ ಅವರೊಂದಿಗೆ ಕೆಲಸ ಮಾಡಲು ಸಂತೋಷವಾಗುತ್ತಿದೆ’’ ಎಂದು 132 ಟೆಸ್ಟ್‌ನಲ್ಲಿ 619 ವಿಕೆಟ್ ಹಾಗೂ 271 ಏಕದಿನಗಳಲಿ 337 ವಿಕೆಟ್‌ಗಳನ್ನು ಪಡೆದಿದ್ದ ಮಾಜಿ ಲೆಗ್-ಸ್ಪಿನ್ನರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News