ಕಠಿಣ ಪರಿಶ್ರಮದ ಮೂಲಕ ಒಲಿಂಪಿಕ್ಸ್ ಟಿಕೆಟ್ ಪಡೆದ ದ್ಯುತಿ ಚಂದ್

Update: 2016-06-26 11:35 GMT

  ಹೊಸದಿಲ್ಲಿ, ಜೂ.26: ಒಂದೊಮ್ಮೆ ಪುರುಷ ಹಾರ್ಮೊನ್ ವಿವಾದದಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟದಿಂದ ಅಮಾನತುಗೊಂಡಿದ್ದ ಒಡಿಶಾದ ಸ್ಪ್ರಿಂಟರ್ ದ್ಯುತಿ ಚಂದ್ ಛಲದಿಂದ ಮುನ್ನುಗ್ಗಿ ಇದೀಗ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
 ದ್ಯುತಿ ಚಂದ್ ಕಳೆದ ಎರಡು ವರ್ಷಗಳ ಹಿಂದೆ ಅಮಾನತುಗೊಂಡಾಗ ಆಕೆಯ ಕ್ರೀಡಾ ಬದುಕು ಮುಗಿದಂತೆ ಎಂದು ಹಲವರು ಭಾವಿಸಿದ್ದರು. ಆದರೆ ಆಕೆ ಈ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಹೋರಾಟದ ಮೂಲಕ ಒಲಿಂಪಿಕ್ಸ್ ಕೂಟಕ್ಕೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಒಡಿಶಾದ ಗೋಪಾಲಪುರದ ನಿವಾಸಿ ದ್ಯುತಿ ಚಂದ್ ಕಝಕಿಸ್ತಾನದ ಅಲ್ಮಾಟಿಯಲ್ಲಿ ಶನಿವಾರ ನಡೆದ 26ನೆ ಜಿ ಕೊಸನೊವ್ ಸ್ಮಾರಕ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ 100 ಮೀಟರ್ ಓಟವನ್ನು 11.30 ಸೆಕೆಂಡ್‌ಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ರಿಯೋ ಅರ್ಹತೆ ಪಡೆಯಲು ಅವರು 11.32 ಸೆಕೆಂಡ್‌ಗಳಲ್ಲಿ ಗುರಿ ತಲುಪಬೇಕಿತ್ತು. ಆದರೆ ಅವರು 00.02 ಸೆಕೆಂಡ್ ಮುಂಚಿತವಾಗಿ ಗುರಿ ತಲುಪಿದರು.
  ಕಳೆದ ಎಪ್ರಿಲ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆದ ಫೆಡರೇಶನ್ ಕಪ್ ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 11.33 ಸೆಕೆಂಡ್‌ಗಳಲ್ಲಿ ಗುರಿ ಸೇರಿದ್ದರು. ಆದರೆ 0.01 ಸೆಕೆಂಡ್‌ಗಳಲ್ಲಿ ಅವರಿಗೆ ಒಲಿಂಪಿಕ್ಸ್ ಅವಕಾಶ ಕೈ ತಪ್ಪಿತ್ತು. ಈ ಬಾರಿ ಅಂತಹ ತಪ್ಪು ಮಾಡದಂತೆ ಎಚ್ಚರ ವಹಿಸಿದರು ದ್ಯುತಿ.
36 ವರ್ಷಗಳ ಬಳಿಕ ಸಾಧನೆ: 1980ರಲ್ಲಿ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಪಯ್ಯ್‌ಲಿ ಎಕ್ಸ್‌ಪ್ರೆಸ್ ಖ್ಯಾತಿಯ ಕೇರಳದ ಓಟದ ರಾಣಿ ಪಿ.ಟಿ.ಉಷಾ ಅವರು 100 ಮೀಟರ್ ಔಟದಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು.
 ಜುಲೈ 26, 1980ರಲ್ಲಿ ಪಿ.ಟಿ.ಉಷಾ ಒಲಿಂಪಿಕ್ಸ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದರು. ಆದರೆ ಅವರು 12.27 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟದ ಹೀಟ್‌ನಲ್ಲಿ 12.27 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಆದರೆ ಅವರಿಗೆ ಇದರಿಂದ ಮುಂದಿನ ಹಂತಕ್ಕೆ ಏರಲು ಸಾಧ್ಯವಾಗಲಿಲ್ಲ.
   ಉಷಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಹೊತ್ತಿಗೆ ದ್ಯುತಿ ಚಂದ್ ಇನ್ನೂ ಹುಟ್ಟಿರಲಿಲ್ಲ. ಆಕೆ ಹುಟ್ಟುವ ಹೊತ್ತಿಗೆ ಇನ್ನೂ ನಾಲ್ಕು ಒಲಿಂಪಿಕ್ಸ್ ಕಳೆದಿದೆ. 1996ರಲ್ಲಿ ದ್ಯುತಿ ಚಂದ್ ಒಡಿಶಾದ ಜಾಜ್‌ಪುರದ ಗೋಪಾಲಪುರದ ಬಡ ನೇಕಾರರ ಕುಟುಂಬದಲ್ಲಿ ಜನಿಸಿದರು. ದ್ಯುತಿ ಚಂದ್ ಅವರ ಅಕ್ಕ ಸರಸ್ವತಿ ಓಟಗಾರ್ತಿ. ಅಕ್ಕನ ಪ್ರಭಾವ ದ್ಯುತಿ ಚಂದ್ ಮೇಲೆ ಬೀರಿದೆ.

   ದ್ಯುತಿ ಚಂದ್ ಒಲಿಂಪಿಕ್ಸ್‌ಗೆ ತೆರ್ಗಡೆಯಾದ ವಿಚಾರ ಗೊತ್ತಾಗುತ್ತಲೇ ಅಕ್ಕ ಸರಸ್ವತಿಗೆ ತಂಗಿಯ ಸಾಧನೆ ಖುಶಿ ನೀಡಿತು. ಬಂಧು ಬಾಂಧವರಿಗೆ ತಂಗಿಯ ಸಾಧನೆಯ ಸುದ್ದಿ ಮುಟ್ಟಿಸಿದ್ದರು. ದ್ಯುತಿ ಮತ್ತು ಸರಸ್ವತಿ ಒಡಿಶಾದ ಬ್ರಾಹ್ಮನಿ ನದಿಯ ದಡದಲ್ಲಿ ಓಟದ ಅಭ್ಯಾಸ ನಡೆಸಿದವರು. ದ್ಯುತಿ ಸಾಧನೆ ಹಿನ್ನೆಲೆಯಲ್ಲಿ ಆಕೆಯ ಊರಲ್ಲಿ ಶನಿವಾರ ಹಬ್ಬದ ವಾತಾವರಣ ಉಂಟಾಗಿತ್ತು. ಕಳೆದ ಎರಡು ತಿಂಗಳಿನಿಂದ ದ್ಯುತಿ ಟ್ರಾಕ್ ಕಾಲಿಡುತ್ತಲೇ ಆಕೆಯ ಯಶಸ್ವಿಗಾಗಿ ಹೆತ್ತವರು ಪ್ರಾರ್ಥಿಸುತ್ತಿದ್ದರು. ನನ್ನ ಹೆತ್ತವರು, ಕೋಚ್ ಎನ್.ರಮೇಶ್ ಮತ್ತು ಸಹೋದರಿ ಸರಸ್ವತಿ ನನಗಾಗಿ ಪ್ರಾರ್ಥಿಸುತ್ತಿದ್ದರು. ಕಿರ್ಗಿಝಿಸ್ತಾನ ಮತ್ತು ಕಝಕಿಸ್ತಾನಕ್ಕೆ ಸ್ಪರ್ಧೆಗೆ ತೆರಳುವ ಮುನ್ನ ಊರಲ್ಲಿ ಪೂಜೆ ನೆರವೇರಿಸಲಾಗಿತ್ತು. 
 ಹಾರ್ಮೊನ್ ವಿವಾದ:ದ್ಯುತಿ ಅವರ ದೇಹದಲ್ಲಿ ಪುರುಷ ಹಾರ್ಮೊನ್ ಅಧಿಕ ಪ್ರಮಾಣದಲ್ಲಿ ಹೊಂದಿರುವ ಕಾರಣಕ್ಕಾಗಿ ಎರಡು ವರ್ಷಗಳ ಹಿಂದೆ ಐಎಎಎಫ್ ಅಂತಾರಾಷ್ಟ್ರೀಯ ಕೂಟಗಳಿಂದ ಅವರನ್ನು ಅಮಾನತುಗೊಳಿಸಿತ್ತು. 2014ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾ ಕೂಟ ಮತ್ತು ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲೂ ಭಾಗವಹಿಸಲು ಅವಕಾಶ ಸಿಗಲಿಲ್ಲ. ಆದರೆ ಇದರಿಂದ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ದ್ಯುತಿ ಸ್ವಿಟ್ಝರ್ಲೆಂಡ್‌ನ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೂಲಕ ಅಥ್ಲೆಟಿಕ್ಸ್‌ಗಳಲ್ಲಿ ಸ್ಪರ್ಧಿಸಲು ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ದ್ಯುತಿ ಚಂದ್ ಸಾಧನೆ
*2012ರಲ್ಲಿ 100 ಮೀಟರ್ ಓಟದಲ್ಲಿ ಅಂಡರ್ -18 ವಿಭಾಗದಲ್ಲಿ ಚಾಂಪಿಯನ್.
*2012 ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು.
*2013ರಲ್ಲಿ 100 ಮೀ. ಮತ್ತು 200 ಮೀ. ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್.
*2014ರಲ್ಲಿ ದೇಹದಲ್ಲಿ ಪುರುಷ ಹಾರ್ಮೊನ್ ಅಧಿಕ ಇರುವ ವಿವಾದದಲ್ಲಿ ಅಮಾನತು
*2015 ಜುಲೈನಲ್ಲಿ ಸಿಎಎಸ್ ನ್ಯಾಯಾಲಯದಿಂದ ಅಮಾನತು ರದ್ದು.
*2016, ಜುಲೈ 25 ರಿಯೋ ಒಲಿಂಪಿಕ್ಸ್‌ಗೆ ತೇರ್ಗಡೆ.
,,,,,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News