×
Ad

ಶೂಟಿಂಗ್ ವಿಶ್ವಕಪ್: ಗಗನ್ ನಾರಂಗ್ ಫೈನಲ್‌ಗೆ

Update: 2016-06-26 23:42 IST

ಬಾಕು, ಜೂ.26: ಶೂಟಿಂಗ್ ವಿಶ್ವಕಪ್‌ನಲ್ಲಿ(ರೈಫಲ್/ಪಿಸ್ತೂಲ್/ಶಾಟ್‌ಗನ್) ಫೈನಲ್‌ಗೆ ತಲುಪಿದ ಭಾರತದ ಶೂಟರ್ ಗಗನ್ ನಾರಂಗ್ ಏಳನೆ ಸ್ಥಾನ ಪಡೆದರು.

  ರವಿವಾರ ಇಲ್ಲಿ ನಡೆದ ಪುರುಷರ 50 ಮೀ.ರೈಫಲ್ ಪ್ರೋನ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 621.1 ಅಂಕವನ್ನು ಗಳಿಸಿದ್ದ ಗಗನ್ ಫೈನಲ್‌ಗೆ ತಲುಪಿದ ಏಳನೆ ಶೂಟರ್ ಎನಿಸಿಕೊಂಡರು. ಒಟ್ಟು 8 ಶೂಟರ್‌ಗಳು ಫೈನಲ್ ಸ್ಪರ್ಧೆಯಲ್ಲಿದ್ದಾರೆ.

ಫೈನಲ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಗಗನ್ ಅಂತಿಮವಾಗಿ 7ನೆ ಸ್ಥಾನಕ್ಕೆ ತೃಪ್ತಿಪಟ್ಟರು. ಡೆನ್ಮಾರ್ಕ್‌ನ ಟಾರ್ಬೆನ್ ಗ್ರಿಮ್ಮೆಲ್ ಚಿನ್ನದ ಪದಕ ಜಯಿಸಿದರು. ಈ ವರ್ಷ ಜಯಿಸಿದ ಮೂರನೆ ಚಿನ್ನದ ಪದಕ ಇದಾಗಿದೆ. ಜರ್ಮನಿಯ ಕಿನ್ನೆತ್ ಪಾರ್ ಬೆಳ್ಳಿ, ಕ್ರೊಯೇಷಿಯಾದ ಪಿಟರ್ ಗಾರ್ಸ ಕಂಚಿನ ಪದಕ ಜಯಿಸಿದ್ದಾರೆ.

ಗಗನ್ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಐದನೆ ಬಾರಿ ಫೈನಲ್‌ಗೆ ತಲುಪಿದ್ದಾರೆ. ಕಳೆದ ವರ್ಷ ಫೋರ್ಟ್ ಬೆನ್ನಿಂಗ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ರಿಯೋ ಒಲಿಂಪಿಕ್ಸ್ ಆರಂಭವಾಗಲು ಇನ್ನು 40 ದಿನಗಳು ಬಾಕಿ ಉಳಿದಿದ್ದು, ಭಾರತದ ಅನುಭವಿ ಶೂಟರ್ ಗಗನ್ ನಾರಂಗ್ ಪ್ರದರ್ಶನ ನಿರಾಶಾದಾಯಕವಾಗಿದೆ.

ಬಾಕು ವಿಶ್ವಕಪ್‌ನಲ್ಲಿ ಭಾರತದ ಶೂಟರ್‌ಗಳು ಆರು ಫೈನಲ್‌ನ್ನು ತಲುಪಿದ್ದಾರೆ. ಈ ಪೈಕಿ ಜಿತು ರಾಯ್ ಶನಿವಾರ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪದಕ ಜಯಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News