ವಿಂಬಲ್ಡನ್ ಟೆನಿಸ್ ಟೂರ್ನಿ ಇಂದು ಆರಂಭ
ಲಂಡನ್, ಜೂ.26: ವಿಂಬಲ್ಡನ್ ಟೆನಿಸ್ ಟೂರ್ನಿ ಸೋಮವಾರದಿಂದ ಇಲ್ಲಿ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ‘ಹ್ಯಾಟ್ರಿಕ್’ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. 47 ವರ್ಷಗಳ ಬಳಿಕ ಕ್ಯಾಲೆಂಡರ್ ವರ್ಷದ ಎಲ್ಲ ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ ಆಟಗಾರನಾಗುವತ್ತ ಚಿತ್ತವಿರಿಸಿದ್ದಾರೆ.
29ರ ಹರೆಯದ ವಿಶ್ವದ ನಂ.1 ಆಟಗಾರ ಜೊಕೊವಿಕ್ 2011, 2014 ಹಾಗೂ 2015ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.
ಇತ್ತೀಚೆಗೆ ಪ್ಯಾರಿಸ್‌ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆಯನ್ನು ಮಣಿಸಿದ್ದ ಜೊಕೊವಿಕ್ 12ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ನಡಾಲ್(14) ಹಾಗೂ ರೋಜರ್ ಫೆಡರರ್(17) ಗ್ರಾನ್‌ಸ್ಲಾಮ್ ದಾಖಲೆ ಮುರಿಯುವತ್ತ ಜೊಕೊವಿಕ್ ಹೆಜ್ಜೆ ಇಟ್ಟಿದ್ದಾರೆ.
ನಡಾಲ್ ಗಾಯದ ಸಮಸ್ಯೆಯಿಂದಾಗಿ ಈವರ್ಷದ ವಿಂಬಲ್ಡನ್‌ನಲ್ಲಿ ಆಡುತ್ತಿಲ್ಲ. ಏಳು ಬಾರಿಯ ಆಲ್ ಇಂಗ್ಲೆಂಡ್ ಕ್ಲಬ್ ಚಾಂಪಿಯನ್ ಫೆಡರರ್ ಕಳೆದ 4 ವರ್ಷಗಳಿಂದ ಪ್ರಮುಖ ಪ್ರಶಸ್ತಿ ಜಯಿಸಿಲ್ಲ.
2013ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಮರ್ರೆ ಈ ವರ್ಷದ ಟೂರ್ನಿಯಲ್ಲಿ ಜೊಕೊವಿಕ್‌ಗೆ ಸವಾಲಾಗಬಲ್ಲ ಏಕೈಕ ಆಟಗಾರ. ಆದರೆ, ಬ್ರಿಟನ್‌ನ ಮರ್ರೆ, ಸರ್ಬಿಯದ ಜೊಕೊವಿಕ್ ವಿರುದ್ಧ 10-24 ಗೆಲುವು-ಸೋಲು ದಾಖಲೆ ಹೊಂದಿದ್ದಾರೆ.
ಜೊಕೊವಿಕ್ ಕಳೆದ 15 ಪಂದ್ಯಗಳ ಪೈಕಿ 13ರಲ್ಲಿ ಜಯ ಸಾಧಿಸಿದ್ದು, ಮೂರು ವರ್ಷಗಳ ಹಿಂದೆ ವಿಂಬಲ್ಡನ್ ಫೈನಲ್‌ನಲ್ಲಿ ಮರ್ರೆಗೆ ಶರಣಾಗಿದ್ದರು.
ಜೊಕೊವಿಕ್ ಪ್ರಸ್ತುತ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. 1969ರ ಬಳಿಕ ಕ್ಯಾಲೆಂಡರ್ ಗ್ರಾನ್‌ಸ್ಲಾಮ್ ಜಯಿಸಿದ ಮೊದಲ ಆಟಗಾರನಾಗುವ ವಿಶ್ವಾಸದಲ್ಲಿದ್ದಾರೆ. ರಾಡ್ ಲೇವರ್ ಟೆನಿಸ್ ಇತಿಹಾಸದಲ್ಲಿ ಮೂರು ಬಾರಿ ಈ ಸಾಧನೆ ಮಾಡಿದ್ದರು.
ಜೊಕೊವಿಕ್ 2009ರ ಫ್ರೆಂಚ್ ಓಪನ್ ನಂತರ ಆಡಿದ್ದ ಎಲ್ಲ ಟೂರ್ನಿಗಳಲ್ಲಿ ಕನಿಷ್ಠ ಕ್ವಾರ್ಟರ್‌ಫೈನಲ್ ತನಕ ತಲುಪಿದ್ದಾರೆ. 1992ರ ಜಿಮ್ಮಿ ಕೊರಿಯರ್ ಬಳಿಕ ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್ ಸತತ ಪಂದ್ಯಗಳಲ್ಲಿ ಜಯಿಸಿದ ಮೊದಲ ಟೆನಿಸ್ ಪಟು ಜೊಕೊವಿಕ್.
ವಯಸ್ಸಿನಲ್ಲಿ ಜೊಕೊವಿಕ್‌ಗಿಂತ ಒಂದು ವಾರ ಹಿರಿಯರಾದ ಮರ್ರೆ ಮೂರನೆ ಮುಖ್ಯ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 2012ರ ಯುಎಸ್ ಓಪನ್ ಹಾಗೂ 2013ರ ವಿಂಬಲ್ಡನ್ ಟ್ರೋಫಿಗಳನ್ನು ಮರ್ರೆ ಜಯಿಸಿದ್ದರು.
ಮರ್ರೆ ಕಳೆದ ಎರಡು ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಹಾಗೂ ಸೆಮಿಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದರು. 2014ರಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಗ್ರಿಗೊರ್ ಡಿಮಿಟ್ರೊವ್ ವಿರುದ್ಧ, 2015ರಲ್ಲಿ ಫೆಡರರ್ ವಿರುದ್ಧ ಮರ್ರೆ ಶರಣಾಗಿದ್ದರು.
ಈ ವರ್ಷದ ವಿಂಬಲ್ಡನ್‌ನಲ್ಲಿ ತಮ್ಮದೇ ದೇಶದ ಲಿಯಾಮ್ ಬ್ರಾಡಿ ವಿರುದ್ಧ ಮೊದಲ ಪಂದ್ಯವನ್ನು ಆಡಲಿದ್ದಾರೆ. 15 ವರ್ಷಗಳ ಹಿಂದೆ ವಿಂಬಲ್ಡನ್‌ನ ನಾಲ್ಕನೆ ಸುತ್ತಿನಲ್ಲಿ ಪೀಟ್ ಸಾಂಪ್ರಸ್‌ರನ್ನು ಮಣಿಸಿದ ಫೆಡರರ್ ವಿಶ್ವದ ಗಮನ ಸೆಳೆದಿದ್ದರು.
2003ರಲ್ಲಿ ಸ್ವಿಸ್ ಸ್ಟಾರ್ ವಿಂಬಲ್ಡನ್‌ನಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದರು. 2012ರಲ್ಲಿ ಏಳನೆ ಬಾರಿ ಪ್ರಶಸ್ತಿ ಜಯಿಸಿದ್ದರು. ಕಳೆದ ಎರಡು ವರ್ಷ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಫೆಡರರ್ ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದಾರೆ. 34ರ ಹರೆಯದ ಫೆಡರರ್ ಪ್ರಸ್ತುತ ಕಳಪೆ ಫಾರ್ಮ್ ಹಾಗೂ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಫೆಡರರ್ ಗಾಯದ ಸಮಸ್ಯೆಯ ಕಾರಣ ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದಿದ್ದರು.
ಒಂದು ವೇಳೆ ಫೆಡರರ್ ವಿಂಬಲ್ಡನ್ ಪ್ರಶಸ್ತಿ ಜಯಿಸಿದರೆ, 1975ರ ಬಳಿಕ ಪ್ರಶಸ್ತಿ ಜಯಿಸಿದ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಫೆಡರರ್ ಮೊದಲ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನದ ಗುಡೊ ಪೆಲ್ಲಾರನ್ನು ಎದುರಿಸಲಿದ್ದಾರೆ.
.