×
Ad

ಯುರೋ ಕಪ್: ಪೋರ್ಚುಗಲ್ ಕ್ವಾರ್ಟರ್ ಫೈನಲ್‌ಗೆ

Update: 2016-06-26 23:50 IST

ಲೆನ್ಸ್(ಫ್ರಾನ್ಸ್), ಜೂ.26: ಬದಲಿ ಆಟಗಾರ ರಿಕಾರ್ಡೊ ಖ್ವಾರೆಸ್ಮಾ ಹೆಚ್ಚುವರಿ ಸಮಯದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಪೋರ್ಚುಗಲ್ ತಂಡ ಕ್ರೊಯೇಷಿಯಾ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿತು. ಈ ಗೆಲುವಿನ ಮೂಲಕ ಯುರೋ ಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು.

ಯುರೋ ಕಪ್‌ನಲ್ಲಿ ಆರನೆ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿರುವ ಪೋರ್ಚುಗಲ್ ಮುಂದಿನ ವಾರ ನಡೆಯಲಿರುವ ಅಂತಿಮ-8ರ ಪಂದ್ಯದಲ್ಲಿ ಪೊಲೆಂಡ್ ತಂಡವನ್ನು ಎದುರಿಸಲಿದೆ.

ಶನಿವಾರ ಇಲ್ಲಿ ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನ 117ನೆ ನಿಮಿಷದಲ್ಲಿ ಖ್ವಾರೆಸ್ಮಾ ಏಕೈಕ ಗೋಲು ಬಾರಿಸಿ ಪೋರ್ಚುಗಲ್‌ಗೆ ರೋಚಕ ಗೆಲುವು ತಂದುಕೊಟ್ಟರು. ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾದವು. ಹೆಚ್ಚುವರಿ ಸಮಯದ ಅಂತಿಮ ಕ್ಷಣದಲ್ಲಿ ಖ್ವಾರೆಸ್ಮಾ ಗೆಲುವಿನ ಗೋಲು ಬಾರಿಸಲು ಸಫಲರಾದರು.

 ಇದಕ್ಕೆ ಮೊದಲು ಪೋರ್ಚುಗಲ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಕ್ರೊಯೇಷಿಯದ ಇವಾನ್ ಪೆರಿಸಿಕ್ ಗೋಲು ಬಾರಿಸಲು ವಿಫಲ ಯತ್ನ ನಡೆಸಿದರು. ರೊನಾಲ್ಡೊ ಬಾರಿಸಿದ ಚೆಂಡನ್ನು ಗೋಲ್‌ಕೀಪರ್ ಡ್ಯಾನಿಜೆಲ್ ಸಬಾಸಿಕ್ ತಡೆ ಹಿಡಿಯಲು ಯಶಸ್ವಿಯಾದರು.

ಕ್ರೊವೇಷಿಯಾದ ಪೆರಿಸಿಕ್ ಅಂತಿಮ ಕ್ಷಣದಲ್ಲಿ ಹೆಡರ್‌ನ ಮೂಲಕ ಗೋಲು ಬಾರಿಸಿದ ಯತ್ನಿಸಿದ್ದರು. ಆದರೆ, ಡೊಮಗೊಜ್ ವಿಡಾ ಚೆಂಡು ಗೋಲು ಪೆಟ್ಟಿಗೆ ಸೇರದಂತೆ ನೋಡಿಕೊಂಡರು.

‘‘ಉಭಯ ತಂಡಗಳು ಪ್ರತಿ ಪಂದ್ಯವನ್ನು ಜಯಿಸಿ ಫೈನಲ್‌ಗೆ ತಲುಪುವ ನಿರೀಕ್ಷೆಯಲ್ಲಿವೆ. ನಾವು ಪಂದ್ಯ ಜಯಿಸಿದರೆ ಅದೃಷ್ಟಶಾಲಿಯಾಗುತ್ತೇವೆ. ಸೋತರೆ ದುರಾದೃಷ್ಟರಾಗುತ್ತೇವೆ. ಇಂದು ನಾವು ಅದೃಷ್ಠಶಾಲಿಗಳಾಗಿದ್ದೆವು’’ಎಂದು ಪೋರ್ಚುಗಲ್ ಕೋಚ್ ಫೆರ್ನಾಂಡೊ ಸ್ಯಾಂಟೊಸ್ ಹೇಳಿದ್ದಾರೆ.

‘‘ನಾವು ಪೋರ್ಚುಲ್‌ನಿಂದ ಪ್ರತಿರೋಧ ನಿರೀಕ್ಷಿಸಿದ್ದೆವು. 120 ನಿಮಿಷಗಳ ಕಾಲ ನಾವು ಉತ್ತಮವಾಗಿಯೇ ಆಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದೆವು. ಕೊನೆಯ ಕ್ಷಣದಲ್ಲಿ ಗೋಲು ಬಿಟ್ಟುಕೊಟ್ಟಿದ್ದು ನಮ್ಮ ತಪ್ಪು. ಆ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿದೆ’’ ಎಂದು ಕ್ರೊಯೇಷಿಯಾ ತಂಡದ ಮ್ಯಾನೇಜರ್ ಆ್ಯಂಟೆ ಕಾಸಿಕ್ ಹೇಳಿದ್ದಾರೆ.

*ಪೋರ್ಚುಗಲ್ ಆಟಗಾರ ನಾನಿ 100ನೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು.

*ರೊನಾಲ್ಡೊ ಯುರೋ ಚಾಂಪಿಯನ್‌ಶಿಪ್‌ನಲ್ಲಿ ಇದೇ ಮೊದಲ ಬಾರಿ ಒಂದೂ ಗೋಲು ಬಾರಿಸದೇ ನಿರಾಸೆಗೊಳಿಸಿದರು.

*ಖ್ವಾರೆಸ್ಮಾ ಯುರೋ ಕಪ್ ಇತಿಹಾಸದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದು ಎರಡು ಗೋಲು ಬಾರಿಸಿದ ಪೋರ್ಚುಗಲ್‌ನ ಮೂರನೆ ಆಟಗಾರ. *ಖ್ವಾರೆಸ್ಮಾ ಯುರೋ ಕಪ್‌ನಲ್ಲಿ 8 ವರ್ಷಗಳ ಬಳಿಕ ಹೆಚ್ಚುವರಿ ಸಮಯದಲ್ಲಿ ಗೋಲು ಬಾರಿಸಿದ ಎರಡನೆ ಆಟಗಾರ. 2008ರಲ್ಲಿ ಹಾಲೆಂಡ್‌ನ ವಿರುದ್ಧ ಆ್ಯಂಡ್ರೆ ಅರ್ಶವಿನ್ ಗೋಲು ಬಾರಿಸಿದ್ದರು.

*ಕ್ರೊಯೇಷಿಯಾ 17 ಬಾರಿ ಅವಕಾಶ ಗಿಟ್ಟಿಸಿಕೊಂಡರೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News