×
Ad

ನಾಲ್ವರು ಭಾರತೀಯರಿಗೆ ರಿಯೋ ಒಲಿಂಪಿಕ್ಸ್ ಟಿಕೆಟ್

Update: 2016-06-26 23:52 IST

ಹೊಸದಿಲ್ಲಿ, ಜೂ.26: ಒಡಿಶಾದ ಓಟಗಾರ್ತಿ ದ್ಯುತಿ ಚಂದ್ 100 ಮೀಟರ್ ಓಟದಲ್ಲಿ ರಿಯೋ ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿರುವ ಬೆನ್ನಲ್ಲೆ ಭಾರತದ ನಾಲ್ವರು ಅಥ್ಲೀಟ್‌ಗಳು ಇಂದು ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.
 ಪುರುಷರ ವಿಭಾಗದ 400 ಮೀಟರ್ ಓಟದಲ್ಲಿ ಕೇರಳದ ಮುಹಮ್ಮದ್ ಅನಾಸ್, ಒಡಿಶಾದ ಸ್ರಬಾನಿ ನಂದಾ ಮಹಿಳೆಯರ 200 ಮೀಟರ್ ಓಟ, ಲಾಂಗ್ ಜಂಪರ್ ಅಂಕಿತ್ ಶರ್ಮ ಮತ್ತು ಆರ್ಚರಿಯಲ್ಲಿ ಅತನು ದಾಸ್ ಒಲಿಂಪಿಕ್ಸ್‌ಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
  ಭಾರತದ ಕ್ವಾರ್ಟರ್‌ಮೈಲರ್ ಮುಹಮ್ಮದ್ ಅನಾಸ್ ಪೊಲೀಶ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 400 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಕೇರಳದ ಅಥ್ಲೀಟ್ 21ರ ಹರೆಯದ ಮುಹಮ್ಮದ್ 45.40ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅವರು ಈ ಹಿಂದೆ 45.44 ಸೆಕೆಂಡ್‌ಗಳಲ್ಲಿ ದಾಖಲೆ ಬರೆದಿದ್ದರು. ರಾಜೀವ್ ಅರೋಕಿಯಾ ಅವರ ರಾಷ್ಟ್ರೀಯ ದಾಖಲೆ 45.47 ಸೆಕೆಂಡ್ ಆಗಿದ್ದು, ಈ ದಾಖಲೆಯನ್ನು ಮುಹಮ್ಮದ್(45.60 ಸೆ.) ಮುರಿದು ಕೂಟದಲ್ಲಿ ಎರಡನೆ ಸ್ಥಾನ ಪಡೆದರು.
ಮುಹಮ್ಮದ್ ಅನಾಸ್ ಕಳೆದ ಎಪ್ರಿಲ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆದ ಫೆಡರೇಶನ್ ಕಪ್ ನ್ಯಾಶನಲ್ ಅಥ್ಲಿಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 45.74 ಸೆಕೆಂಡ್‌ಗಳಲ್ಲಿ ಗುರಿ ಸೇರಿ ಬೆಳ್ಳಿ ಜಯಿಸಿದ್ದರು. ಮುಹಮ್ಮದ್ ಒಲಿಂಪಿಕ್ಸ್‌ಗೆ ತೇರ್ಗಡೆಯಾದ 100ನೆ ಸ್ಪರ್ಧಿ.
 ಸ್ರಬಾನಿ ನಂದಾ: ಒಡಿಶಾದ ದ್ಯುತಿ ಚಂದ್ ಬಳಿಕ ಇನ್ನೊಬ್ಬಳು ಅಥ್ಲೀಟ್ ಒಲಿಂಪಿಕ್ಸ್‌ಗೆ ತೆರ್ಗಡೆಯಾಗಿದ್ದಾರೆ. ಅವರು ಸ್ರಬಾನಿ ನಂದ. ಕಝಕಿಸ್ತಾನದ ಜಿ.ಕೊಸನೊವ್ ಸ್ಮಾರಕ ಅಂತಾರಾಷ್ಟ್ರೀಯ ಅಥ್ಲೀಟಿಕ್ಸ್ ಕೂಟದಲ್ಲಿ 23.07 ಸೆಕೆಂಡ್‌ಗಳಲ್ಲಿ 200 ಮೀಟರ್ ಓಟ ಪೂರೈಸಿದರು. ಒಲಿಂಪಿಕ್ಸ್ ಅರ್ಹತೆ ಪಡೆಯಲು ಅವರು 23.20 ಸೆಕೆಂಡ್‌ಗಳಲ್ಲಿ ಗುರಿ ತಲುಪಬೇಕಿತ್ತು. ಆದರೆ ಸುಲಭವಾಗಿ ತೇರ್ಗಡೆಯಾಗಿದ್ದಾರೆ.ಸ್ರಬಾನಿ ಕಳೆದ ಆಗಸ್ಟ್‌ನಲ್ಲಿ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದಕ್ಕಾಗಿ ತಯಾರಿ ಆರಂಭಿಸಿದ್ದರು.
 24ರಹರೆಯದ ಸ್ರಬಾನಿ ನಂದ ಬುಡಕಟ್ಟು ಜನಾಂಗದ ಪ್ರಾಬಲ್ಯ ಇರುವ ಕಂಧಾಮಾಲ್ ಜಿಲ್ಲೆಯ ಫುಲ್ಬಾನಿಯವರು. ಇದರೊಂದಿಗೆ ಒಡಿಶಾದ ಇಬ್ಬರು ಅಥ್ಲೀಟ್‌ಗಳು 16 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿದ್ದಾರೆ.
ಲಾಂಗ್‌ಜಂಪ್‌ನಲ್ಲಿ ಅಂಕಿತ್ ಶರ್ಮ ತೇರ್ಗಡೆ
ಕಝಕಿಸ್ತಾನದ ಜಿ.ಕೊಸನೊವ್ ಸ್ಮಾರಕ ಅಂತಾರಾಷ್ಟ್ರೀಯ ಅಥ್ಲೀಟಿಕ್ಸ್ ಕೂಟದ ಲಾಂಗ್ ಜಂಪ್ ವಿಭಾಗದಲ್ಲಿ ಅಗ್ರಾದ ಕುಗ್ರಾಮವಾಗಿರುವ ಪಿನ್ಹಾತ್‌ನ ಅಂಕಿತ್ ಶರ್ಮ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದಿದ್ದಾರೆ.
8.19 ಮೀಟರ್ ಉದ್ದ ಜಿಗಿದು ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಅಂಕಿತ ಶರ್ಮ ಚಿನ್ನ ಪಡೆದರು.
ಅಂಕಿತ ಅವರದ್ದು ಕ್ರೀಡಾ ಪಟುಗಳ ಕುಟುಂಬ.

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಸಹೋದರ ಪರ್ವೆಶ್ ಶರ್ಮ ಮತ್ತು ತಂದೆ ಹರಿನಾಥ್ ಶರ್ಮ ಭಾಗವಹಿಸಿದ್ದರು. ಪರ್ವೆಶ್ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದಾರೆ. ತಂದೆ ನಿವೃತ್ತ ಸರಕಾರಿ ಶಿಕ್ಷಕರು.

ಒಲಿಂಪಿಕ್ಸ್‌ಗೆ ಬಿಲ್ಗಾರ ಅತನು ದಾಸ್ ಆಯ್ಕೆ

ಬೆಂಗಳೂರು, ಜೂ.26: ಭಾರತದ ಆರ್ಚರಿ ಸಂಸ್ಥೆ(ಎಎಐ) ಟ್ರಯಲ್ಸ್ ನಡೆಸಿದ ಬಳಿಕ ಮುಂಬರುವ ಒಲಿಂಪಿಕ್ಸ್‌ಗೆ ಪುರುಷರ ರಿಕರ್ವ್ ಸ್ಪರ್ಧೆಗೆ ಅತನು ದಾಸ್‌ರನ್ನು ರವಿವಾರ ಆಯ್ಕೆ ಮಾಡಿದೆ.

ದಾಸ್ ಆಗಸ್ಟ್‌ನಲ್ಲಿ ರಿಯೋ ಜನೈರೋದಲ್ಲಿ ನಡೆಯಲಿರುವ ರಿಯೋ ಗೇಮ್ಸ್‌ನಲ್ಲಿ ಆರ್ಚರಿಯ್ಲ ಪುರುಷರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವ ಏಕೈಕ ಆರ್ಚರಿ ಪಟು ಆಗಿದ್ದಾರೆ. ದಾಸ್ ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟ್ರಯಲ್ಸ್‌ನಲ್ಲಿ ಮಾಜಿ ಒಲಿಂಪಿಯನ್‌ಗಳಾದ ಜಯಂತ್ ತಾಲೂಕ್ದಾರ್ ಹಾಗೂ ಮಂಗಳ್ ಸಿಂಗ್ ಚಾಂಪಿಯಾರನ್ನು ಹಿಂದಿಕ್ಕಿದ 24ರ ಹರೆಯದ ಕೋಲ್ಕತಾದ ದಾಸ್ ಮೊದಲ ಬಾರಿ ಒಲಿಂಪಿಕ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಅಂಟಲಿಯಾದಲ್ಲಿ ನಡೆದ ವರ್ಲ್ಡ್ ಕಪ್ ಸ್ಟೇಜ್-3ರ ಸೆಮಿಫೈನಲ್‌ನಲ್ಲಿ ಭಾಗವಹಿಸಿದ್ದ ದಾಸ್ ನಾಕೌಟ್ ರೌಂಡ್‌ನಲ್ಲಿ ತಾಲೂಕ್ದಾರ್ ಹಾಗೂ ಚಾಂಪಿಯಾರನ್ನು ಸೋಲಿಸಿದ್ದರು.

ಕಳೆದ ವರ್ಷ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ-8ರಲ್ಲಿ ಸ್ಥಾನ ಪಡೆದಿದ್ದ ಚಾಂಪಿಯಾ ದುರದೃಷ್ಟವಶಾತ್ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲಿಲ್ಲ. ಮಹಿಳೆಯರ ರಿಕರ್ವ್ ತಂಡದ ದೀಪಿಕಾ ಕುಮಾರಿ, ಎಲ್.ಬಾಂಬೆಲಾದೇವಿ ಹಾಗೂ ಲಕ್ಷ್ಮಿರಾಣಿ ಮಂಜ್ಹಿ ಈಗಾಗಲೇ ವೈಯಕ್ತಿಕ ಹಾಗೂ ಟೀಮ್ ವಿಭಾಗದಲ್ಲಿ ರಿಯೋ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಆದರೆ, ಭಾರತದ ಪುರುಷರ ತಂಡ ಒಲಿಂಪಿಕ್ಸ್‌ನ ಅಂತಿಮ ಅರ್ಹತಾ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು.

ಇತ್ತೀಚೆಗೆ ಅಂಟಲಿಯಾದಲ್ಲಿ ನಡೆದ ಆರ್ಚರಿ ವಿಶ್ವಕಪ್‌ನ ಮಿಶ್ರ ವಿಭಾಗದಲ್ಲಿ ದಾಸ್ ಅವರು ದೀಪಿಕಾ ಕುಮಾರಿ ಜೊತೆಗೂಡಿ ಬೆಳ್ಳಿ ಪದಕವನ್ನು ಜಯಿಸಿದ್ದರು. ಇದೇ ಟೂರ್ನಿಯಲ್ಲಿ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದರು.

 ದಾಸ್ ಈ ಹಿಂದೆ 2014ರಲ್ಲಿ ನಡೆದ ಆರ್ಚರಿ ವಿಶ್ವಕಪ್‌ನಲ್ಲಿ ಟೀಮ್ ವಿಭಾಗದಲ್ಲಿ ಎರಡು ಬೆಳ್ಳಿ ಹಾಗೂ 2013 ಹಾಗೂ 2014ರ ವಿಶ್ವಕಪ್‌ನಲ್ಲಿ ಮಿಶ್ರ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News