ಅಮೆರಿಕವನ್ನು ಮಣಿಸಿದ ಕೊಲಂಬಿಯಾಕ್ಕೆ 3ನೆ ಸ್ಥಾನ

Update: 2016-06-26 18:23 GMT

 ನ್ಯೂಯಾರ್ಕ್, ಜೂ.26: ಆತಿಥೇಯ ಅಮೆರಿಕ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಕೊಲಂಬಿಯಾ 100ನೆ ಆವೃತ್ತಿಯ ಕೋಪಾ ಅಮೆರಿಕ ಟೂರ್ನಿಯಲ್ಲಿ ಮೂರನೆ ಸ್ಥಾನ ಪಡೆದಿದೆ.

ಶನಿವಾರ ಇಲ್ಲಿ ಮೂರನೆ ಸ್ಥಾನಕ್ಕಾಗಿ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಎಸಿ ಮಿಲನ್ ಸ್ಟ್ರೈಕರ್ ಕಾರ್ಲೊಸ್ ಬಾಕಾ 31ನೆ ನಿಮಿಷದಲ್ಲಿ ಗೋಲು ಬಾರಿಸಿ ಕೊಲಂಬಿಯಾಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಅಮೆರಿಕ ತಂಡ ಅರ್ಜೆಂಟೀನದ ವಿರುದ್ಧ 4-0 ಗೋಲುಗಳ ಅಂತರದಿಂದ ಹೀನಾಯವಾಗಿ ಸೋತಿತ್ತು. ಕೊಲಂಬಿಯಾ ವಿರುದ್ಧದ ಪಂದ್ಯದಲ್ಲೂ ಕಳಪೆ ಪ್ರದರ್ಶನ ಮುಂದುವರಿಸಿದ ಅಮೆರಿಕ ಪ್ರಸ್ತುತ ಟೂರ್ನಿಯಲ್ಲಿ ಕೊಲಂಬಿಯಾಗೆ ಎರಡನೆ ಬಾರಿ ಶರಣಾಯಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕೊಲಂಬಿಯಾ ತಂಡ ಅಮೆರಿಕವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿತ್ತು.

ಅರ್ಜೆಂಟೀನದ ವಿರುದ್ಧ ಶೂನ್ಯ ಸಂಪಾದನೆ ಮಾಡಿದ್ದ ತಂಡವನ್ನು ಅಮೆರಿಕದ ಕೋಚ್ ಜುರ್ಗೆನ್ ಕ್ಲಿನ್ಸ್‌ಮನ್ ಟೀಕಿಸಿದ್ದಾರೆ.

ಕೊಲಂಬಿಯಾ 12ನೆ ನಿಮಿಷದಲ್ಲಿ ರಿಯಲ್‌ಮ್ಯಾಡ್ರಿಡ್ ಸ್ಟಾರ್ ಜೇಮ್ಸ್ ರೊಡ್ರಿಗಸ್ ನೆರವಿನಿಂದ ಗೋಲು ಬಾರಿಸುವ ಪ್ರಯತ್ನ ನಡೆಸಿತ್ತು. ಆದರೆ, ಟಿಮ್ ಹೌವಾರ್ಡ್ ಈ ಪ್ರಯತ್ನವನ್ನು ವಿಫಲಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News