ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ

Update: 2016-06-27 11:07 GMT


ಬಾರ್ಸಿಲೋನಾ, ಜೂ.27: ಫುಟ್ಬಾಲ್‌ ಜಗತ್ತಿನ ಸ್ಟಾರ್‌ ಆಟಗಾರ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಸೋಮವಾರ ವಿದಾಯ ಹೇಳಿದ್ದಾರೆ.
ಅರ್ಜೆಂಟೀನ ತಂಡ ಕೋಪಾ ಅಮೆರಿಕ  ಫುಟ್ಬಾಲ್‌ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಚಿಲಿ ವಿರುದ್ಧ ಸೋಲು ಅನುಭವಿಸಿದ ಬೆನ್ನಲ್ಲೆ  ಮೆಸ್ಸಿ ವಿದಾಯ ಘೋಷಿಸಿದರು.ಕೋಪಾ ಅಮೆರಿಕ ಫುಟ್ಬಾಲ್‌ ಟೂರ್ನಮೆಂಟ್‌ನ ಫೈನಲ್‌ನಲ್ಲಿ   ಅರ್ಜೆಂಟೀನಾ  ತಂಡ ಚಿಲಿ ವಿರುದ್ಧ 2-4 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ  ಆಘಾತಗೊಂಡ ಮೆಸ್ಸಿ ಸಾಕರ‍್ ಜಗತ್ತಿನಿಂದ ನಿರ್ಗಮಿಸುವ ನಿರ್ಧಾರ ಕೈಗೊಂಡರು.

"ರಾಷ್ಟ್ರೀಯ ತಂಡದದಲ್ಲಿ ನನ್ನ ಆಟ ಮುಗಿದಿದೆ.ನನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದೆ. ಆದರೆ ಕೋಪಾ ಅಮೆರಿಕ ಟೂರ್ನಮೆಂಟ್‌ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಸಾಧ್ಯವಾಗಲಿಲ್ಲ" ಎಂದು 29ರ ಹರೆಯದ ಸೂಪರ್‌ ಸ್ಟಾರ‍್ ಆಟಗಾರ ಮೆಸ್ಸಿ ನೊಂದು ನುಡಿದರು.
ಮೆಸ್ಸಿ ತಂಡ ಸತತ ಎರಡನೆ ಬಾರಿ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಎಡವಿದೆ.  ಸತತ ನಾಲ್ಕು ಅಂತಾರಾಷ್ಟ್ರೀಯ ಟೂರ್ನಮೆಂಟ್ ಗಳಲ್ಲಿ ಮೆಸ್ಸಿ ತಂಡ ಪ್ರಶಸ್ತಿ ಎತ್ತುವಲ್ಲಿ ಮುಗ್ಗರಿಸಿದೆ. ಕಳೆದ 23ವರ್ಷಗಳಿಂದ ಪ್ರಶಸ್ತಿಯ ಬರ ಎದುರಿಸುತ್ತಿದೆ.
ಉಭಯ ತಂಡಗಳಿಗೂ 90  ನಿಮಿಷಗಳ ಆಟದಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಬಳಿಕ ನೀಡಲಾದ ಅರ್ಧ ಗಂಟೆ ಹೆಚ್ಚುವರಿ ಸಮಯದಲ್ಲೂ ಗೋಲು ಬರಲಿಲ್ಲ. ಪಂದ್ಯ ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಾಗ ಪೆನಾಲ್ಟಿ ಶೂಟೌಟ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಯಿತು. ಮೆಸ್ಸಿ ಮತ್ತು ಲೂಕಸ್‌ ಬಿಗ್ಲಿಯಾ ಪೆನಾಲ್ಟಿ ಶೂಟೌಟ್‌ ನಲ್ಲಿ ಚೆಂಡನ್ನು ಗುರಿ ತಲುಪಿಸುವಲ್ಲಿ ಎಡವಿದರು.ಇದರಿಂದಾಗಿ ಮೆಸ್ಸಿ ತಂಡಕ್ಕೆ ಸೋಲಾಯಿತು.
ರಿಯೋ ಒಲಿಂಪಿಕ್ಸ್: ಅರ್ಜೆಂಟೀನಾ ತಂಡದಲ್ಲಿ ಮೆಸ್ಸಿಗೆ ಸ್ಥಾನ ಅಲಭ್ಯ
ಫುಟ್ಬಾಲ್‌  ಜಗತ್ತಿನ ಸ್ಟಾರ್ ಆಟಗಾರ  ಲಿಯೋನೆಲ್ ಮೆಸ್ಸಿ ಅವರು ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ.
ಕೋಚ್ ಗೆರಾರ್ಡೋ ಮಾರ್ಟಿನೋ ಪ್ರಕಟಿಸಿರುವ ತಂಡದ ಪಟ್ಟಿಯಲ್ಲಿ  ಮೆಸ್ಸಿ ಹೆಸರಿಲ್ಲ..2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ತಂಡಕ್ಕೆ ಸ್ವರ್ಣ ಗೆದ್ದು ಕೊಡುವಲ್ಲಿ ಲಿಯೋನೆಲ್ ಮೆಸ್ಸಿ ಮಹತ್ವದ ಪಾತ್ರ ವಹಿಸಿದ್ದರು.
ಮೆಸ್ಸಿ ಸಾಧನೆ

ಅರ್ಜೆಂಟೀನಾ ರಾಷ್ಟ್ರೀಯ ತಂಡ: ಪಂದ್ಯ 113, ಗೋಲು 55
ಬಾರ್ಸಿಲೋನಾ ತಂಡ: ಪಂದ್ಯ 348, ಗೋಲು 313

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News