ಅರ್ಜೆಂಟೀನದ ಲಿಯೊನೆಲ್ ಮೆಸ್ಸಿ ಟೈಮ್‌ಲೈನ್

Update: 2016-06-27 18:04 GMT

ನ್ಯೂಯಾರ್ಕ್, ಜೂ.27: ನೂರನೆ ಆವೃತ್ತಿಯ ಕೋಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲಿ ಅರ್ಜೆಂಟೀನ ತಂಡ ಚಿಲಿ ವಿರುದ್ಧ ಸೋತ ಬೆನ್ನಿಗೇ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದರು. ಮೆಸ್ಸಿ ಅವರ ಅಂತಾರಾಷ್ಟ್ರೀಯ ವೃತ್ತಿಬದುಕಿನ ಆಯ್ದ 10 ಟೈಮ್‌ಲೈನ್ ಈ ಕೆಳಗಿನಂತಿವೆ....

 1. ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾರ್ಪಣೆ

 2005ರ ಆಗಸ್ಟ್ 17 ರಂದು ತನ್ನ 18ರ ಹರೆಯದಲ್ಲಿ ಮೆಸ್ಸಿ ಹಂಗೇರಿ ವಿರುದ್ಧ ಸೌಹಾರ್ದ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾರ್ಪಣೆಗೈದರು.

2. ಮೆಸ್ಸಿಯ ಮೊದಲ ಅಂತಾರಾಷ್ಟ್ರೀಯ ಗೋಲು

ಮಾರ್ಚ್ 1,2006ರಲ್ಲಿ ಕ್ರೊಯೇಷಿಯಾ ತಂಡದ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಗೋಲು ಬಾರಿಸಿದರು.

 3. ಒಲಿಂಪಿಕ್ ಪದಕ ಜಯಿಸಿದ ಮೆಸ್ಸಿ

ಮೆಸ್ಸಿ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅರ್ಜೆಂಟೀನ ತಂಡ ಚಿನ್ನದ ಪದಕ ಜಯಿಸಲು ನೆರವಾದರು.

4. 2010ರ ವಿಶ್ವಕಪ್‌ನಲ್ಲಿ ಮೆಸ್ಸಿ ವಿಫಲ

2010ರ ವಿಶ್ವಕಪ್‌ನಲ್ಲಿ ಡಿಯಾಗೊ ಮರಡೋನಾ ಮಾರ್ಗದರ್ಶನದಲ್ಲಿ ಆಡಿದ್ದ ಅರ್ಜೆಂಟೀನ ತಂಡದಲ್ಲಿ ಸ್ಥಾನಪಡೆದಿದ್ದ ಮೆಸ್ಸಿ ಟೂರ್ನಿಯಲ್ಲಿ ಗೋಲು ಬಾರಿಸಲು ವಿಫಲರಾದರು. ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿಯ ವಿರುದ್ಧ 4-0 ಗೋಲುಗಳ ಅಂತರದಿಂದ ಸೋತಿದ್ದ ಅರ್ಜೆಂಟೀನ ಟೂರ್ನಿಯಿಂದ ಬೇಗನೆ ಹೊರ ನಡೆದಿತ್ತು.

5. ಮೆಸ್ಸಿ ‘ಹ್ಯಾಟ್ರಿಕ್’ ಮ್ಯಾನ್

2013ರಲ್ಲಿ ಸ್ವಿಟ್ಝರ್ಲೆಂಡ್ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಮೆಸ್ಸಿ ಅರ್ಜೆಂಟೀನದ ಪರ ಮೊದಲ ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿ 3-1 ಗೋಲುಗಳ ಅಂತರದ ಗೆಲುವಿಗೆ ನೆರವಾಗಿದ್ದರು. ಜೂನ್‌ನಲ್ಲಿ ಬ್ರೆಝಿಲ್ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಹ್ಯಾಟ್ರಿಕ್ ಗೋಲು ಬಾರಿಸಿ ತಂಡದ 4-3 ಗೋಲುಗಳಂತರದ ಗೆಲುವಿಗೆ ನೆರವಾಗಿದ್ದರು.

6. ಮರಡೋನಾಗೆ ಅಚ್ಚರಿಗೊಳಿಸಿದ ಮೆಸ್ಸಿ

2013ರಲ್ಲಿ ಗ್ವಾಟೆಮಲಾ ತಂಡದ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿದ ಮೆಸ್ಸಿ, ಮರಡೋನಾ ಹೆಸರಲ್ಲಿದ್ದ ಗರಿಷ್ಠ ಅಂತಾರಾಷ್ಟ್ರೀಯ ಗೋಲುಗಳ ದಾಖಲೆಯನ್ನು ಸರಿದೂಗಿಸಿದರು.

7. 2014ರ ವಿಶ್ವಕಪ್‌ನಲ್ಲೂ ನಿರಾಸೆ ಮೂಡಿಸಿದ ಮೆಸ್ಸಿ

ಬ್ರೆಝಿಲ್‌ನಲ್ಲಿ ನಡೆದ 2014ರ ಫುಟ್ಬಾಲ್ ವಿಶ್ವಕಪ್‌ನಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನ ತಂಡ ಫೈನಲ್‌ನಲ್ಲಿ ಜರ್ಮನಿಗೆ ಶರಣಾಯಿತು. ಮೆಸ್ಸಿ ಮತ್ತೊಮ್ಮೆ ಫುಟ್ಬಾಲ್ ಅಭಿಮಾನಿಗಳಿಗೆ ನಿರಾಸೆಗೊಳಿಸಿದ್ದರು.

8. ಮೆಸ್ಸಿಯಿಂದ 19 ನಿಮಿಷಗಳಲ್ಲಿ ‘ಹ್ಯಾಟ್ರಿಕ್’ ಗೋಲು

2016ರ ಕೋಪಾ ಅಮೆರಿಕ ಟೂರ್ನಿಯಲ್ಲಿ ಪನಾಮಾ ವಿರುದ್ಧದ ಪಂದ್ಯದಲ್ಲಿ ವೆುಸ್ಸಿ 19 ನಿಮಿಷಗಳ ಅಂತರದಲ್ಲಿ ‘ಹ್ಯಾಟ್ರಿಕ್’ ಗೋಲು ಬಾರಿಸಿ ಗಮನ ಸೆಳೆದಿದ್ದರು.

9. ಮೆಸ್ಸಿ ಕೈಗೆಟುಕದ ಕೋಪಾ ಕಪ್

ಮೆಸ್ಸಿ ಮೂರು ಬಾರಿ(2007, 2015, 2016)ಕೋಪಾ ಅಮೆರಿಕ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. 2011ರಲ್ಲಿ ಅರ್ಜೆಂಟೀನದಲ್ಲಿ ನಡೆದ ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನ ಕ್ವಾರ್ಟರ್‌ಫೈನಲ್‌ನಲ್ಲೇ ಸೋತು ಹೊರ ನಡೆದಿತ್ತು.

10. ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಮೆಸ್ಸಿ

ಮೆಸ್ಸಿಯ ಅಂತಾರಾಷ್ಟ್ರೀಯ ವೃತ್ತಿಜೀವನದ ಅಂತ್ಯ ಭಾರೀ ಬೇಸರ, ಆಘಾತ ತಂದಿದೆ. ಮೆಸ್ಸಿ ಚಿಲಿ ವಿರುದ್ಧ ಕೋಪಾ ಅಮೆರಿಕ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಬಾರಿಸಲು ವಿಫಲರಾಗಿದ್ದರು. ಅರ್ಜೆಂಟೀನ ಸತತ ಎರಡನೆ ಬಾರಿ ಚಿಲಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಶರಣಾಗಿತ್ತು. ಅರ್ಜೆಂಟೀನ ಕಳೆದ ವರ್ಷದಂತೆಯೇ ಈ ವರ್ಷವೂ ಚಿಲಿಗೆ ಶರಣಾಗಿದ್ದರಿಂದ ಹತಾಶರಾದ ಮೆಸ್ಸಿ ದಿಢೀರನೆ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News