ತ್ರಿಕೋನ ಏಕದಿನ ಸರಣಿ: ಆಸ್ಟ್ರೇಲಿಯಕ್ಕೆ ಟ್ರೋಫಿ
ಬ್ರಿಡ್ಜ್‌ಟೌನ್, ಜೂ.27: ತ್ರಿಕೋನ ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯ ತಂಡ ಆತಿಥೇಯ ವೆಸ್ಟ್‌ಇಂಡೀಸ್ ತಂಡವನ್ನು 58 ರನ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್(ಔಟಾಗದೆ 57) ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ವಿಂಡೀಸ್‌ಗೆ 271 ರನ್ ಗುರಿ ನೀಡಿತು.
ಮಿಚೆಲ್ ಮಾರ್ಷ್(3-32) ಹಾಗೂ ಜೋಶ್ ಹೇಝಲ್ ವುಡ್‌ರ(5-50)ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ವೆಸ್ಟ್‌ಇಂಡೀಸ್ 45.4 ಓವರ್‌ಗಳಲ್ಲಿ 212 ರನ್‌ಗೆ ಆಲೌಟಾಗಿತ್ತು. ಮಾರ್ಷ್ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಜಾನ್ಸನ್ ಚಾರ್ಲ್ಸ್, ಡರೆನ್ ಬ್ರಾವೊ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್ ವಿಕೆಟ್‌ಗಳನ್ನು ಕಬಳಿಸಿದರು. ಹೇಝಲ್‌ವುಡ್ ಕೆಳ ಕ್ರಮಾಂಕದ ಆಟಗಾರರನ್ನು ಕಾಡಿದರು.
ವಿಂಡೀಸ್‌ನ ಪರ ಆರಂಭಿಕ ಬ್ಯಾಟ್ಸ್‌ಮನ್ ಜಾನ್ಸನ್ ಚಾರ್ಲ್ಸ್ (45 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು. ಚಾರ್ಲ್ಸ್ ಅವರು ಆ್ಯಂಡ್ರೆ ಫ್ಲೆಚರ್ ಅವರೊಂದಿಗೆ 49 ರನ್ ಸೇರಿಸಿ ಉತ್ತಮ ಆರಂಭವನ್ನೇ ನೀಡಿದ್ದರು. ಹೇಝಲ್‌ವುಡ್ 11ನೆ ಓವರ್‌ನಲ್ಲಿ ಫ್ಲೆಚರ್ ವಿಕೆಟ್ ಉಡಾಯಿಸಿ ಈ ಜೋಡಿಯನ್ನು ಬೇರ್ಪಡಿಸಿದರು.
72 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ಗೆಲುವಿನ ಆಸೆ ಕೈಬಿಟ್ಟಿತ್ತು. ಲೆಗ್ ಸ್ಪಿನ್ನರ್ ಆಡಮ್ ಝಾಂಪ ಬಿಗ್‌ಹಿಟ್ಟರ್ ಕೀರನ್ ಪೊಲಾರ್ಡ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ದಿನೇಶ್ ರಾಮ್ದಿನ್(40 ರನ್) ಹಾಗೂ ನಾಯಕ ಜೇಸನ್ ಹೋಲ್ಡರ್(34) 43 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಲು ಯತ್ನಿಸಿದ್ದರು.
ಹೇಝಲ್‌ವುಡ್ ‘ಸರಣಿಶ್ರೇಷ್ಠ’ ಹಾಗೂ ಮಾರ್ಷ್ ‘ಪಂದ್ಯಶ್ರೇಷ್ಟ’ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 270/9
(ವ್ಯಾಡ್ ಔಟಾಗದೆ 57, ಫಿಂಚ್ 47, ಸ್ಮಿತ್ 46, ಮಾರ್ಷ್ 32, ಹೋಲ್ಡರ್ 2-51, ಗ್ಯಾಬ್ರಿಯಲ್ 2-58)
ವೆಸ್ಟ್‌ಇಂಡೀಸ್: 45.4 ಓವರ್‌ಗಳಲ್ಲಿ 212ರನ್‌ಗೆ ಆಲೌಟ್
(ಚಾರ್ಲ್ಸ್ 45, ರಾಮ್ಡೀನ್ 40, ಹೋಲ್ಡರ್ 34, ಹೇಝಲ್‌ವುಡ್ 5-50, ಮಾರ್ಷ್ 3-32)